Connect with us

    DAKSHINA KANNADA

    ಪುತ್ತೂರು ಶಾಸಕರ ವಾರ್ ರೂಂ ನಿಂದ ಜನಮೆಚ್ಚುವ ಸೇವೆ..

    ಪುತ್ತೂರು, ಮೇ 04 :ಕೊರೊನಾ ಸೋಂಕಿಗೆ ಬಲಿಯಾಗಿ ದೇಶದಲ್ಲಿ ಈಗಾಗಲೇ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಸಾವನ್ನಪ್ಪಿದ ರೋಗಿಗಳ ಶವಸಂಸ್ಕಾರ ನಡೆಸಲೂ ಮನೆ ಮಂದಿಯೇ ಹಿಂದೇಟು ಹಾಕುವ ಸಾಕಷ್ಟು ಪ್ರಕರಣಗಳು ಇಂದಿಗೂ ವರದಿಯಾಗುತ್ತಿವೆ. ಹೀಗೆ ಕೊರೊನಾ ಸೋಂಕಿಗೆ ಹೆದರಿ ಶವಸಂಸ್ಕಾರಕ್ಕೆ ಹಿಂದೆ ಸರಿಯುವ ಕುಟುಂಬಗಳಿಗೆ ಆಸರೆಯಾಗಿ ದಕ್ಷಿಣಕನ್ನಡ ಪುತ್ತೂರಿನ ತಂಡವೊಂದು ನಿಂತಿದೆ. ಪುತ್ತೂರು ಶಾಸಕರ ಕೊರೊನಾ ವಾರ್ ರೂಂ ಸದಸ್ಯರಾಗಿರುವ ಈ ತಂಡ ಈಗಾಗಲೇ 30 ಇಂಥಹ ಶವಸಂಸ್ಕಾರಗಳನ್ನು ನಡೆಸಿದ್ದು, ಯಾವ ಸಮಯದಲ್ಲಿ ಕರೆದರೂ ಸ್ಪಂದನೆ ನೀಡುತ್ತಿದೆ.

    ಕೋವಿಡ್ 19 ವೈರಾಣು ದೇಶದಲ್ಲಿ ಹಲವಾರು ಜನರ ಪ್ರಾಣವನ್ನು ಬಲಿಪಡೆದಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕು ಅಂಟಿಸಿಕೊಂಡು ನಿಧನರಾಗುವ ಸಾಕಷ್ಟು ರೋಗಿಗಳ ಕುಟುಂಬಗಳು ಶವಸಂಸ್ಕಾರ ನಡೆಸಲು ಹಿಂದೇಟು ಹಾಕಿದ ಹಲವು ಉದಾಹರಣೆಗಳು ನಮ್ಮ ನಿಮ್ಮ ಮುಂದಿದೆ. ಅತ್ಯಂತ ಪ್ರೀತಿ ಪಾತ್ರರಾದರೂ,ಕೊನೆಯ ಗಳಿಗೆಯಲ್ಲಿ ಆರೈಕೆ ಮಾಡಲಾಗದಂತಹ ಸ್ಥಿತಿಯನ್ನೂ ಕೊರೊನಾ ತಂದೊಡ್ಡಿದೆ. ಹೀಗೆ ಶವಸಂಸ್ಕಾರ ಮಾಡಲು ಹಿಂದೆ ಸರಿಯುವ ಕುಟುಂಬಗಳ ಜವಾಬ್ದಾರಿಯನ್ನು ದಕ್ಷಿಣಕನ್ನಡ ಜಿಲ್ಲೆಯು ಪುತ್ತೂರಿನ ಶಾಸಕರ ಕೊರೊನಾ ವಾರ್ ರೂಂ ವಹಿಸಿಕೊಂಡಿದೆ.

    ಜಿಲ್ಲೆಯ ಯಾವ ಭಾಗದಲ್ಲೂ ಇಂಥಹ ಪ್ರಕರಣಗಳು ಪತ್ತೆಯಾದ ಸಂದರ್ಭದಲ್ಲಿ ನೆರವಿಗೆ ಧಾವಿಸುವ ಈ ತಂಡ ಈಗಾಗಲೇ 30 ಅಂತ್ಯಸಂಸ್ಕಾರವನ್ನು ಆಯಾಯ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ನಡೆಸಿದೆ. ಪುತ್ತೂರಿಗೆ ಸಂಬಂಧಪಟ್ಟವರು ರಾಜ್ಯದ ಯಾವ ಭಾಗದಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಲ್ಲಿ, ಆ ಕುಟುಂಬ ಅಪೇಕ್ಷೆ ಪಟ್ಟಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಈ ತಂಡ ಅಂತ್ಯ ಸಂಸ್ಕಾರವನ್ನು ನಡೆಸುತ್ತದೆ. ದೇಶಕ್ಕೆ ಕೊರೊನಾ ಮೊದಲ ಅಲೆ ಆವರಿಸಿದ ಸಂದರ್ಭದಲ್ಲಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಒಂದೆಡೆಯಾದರೆ, ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರಕ್ಕೂ ಪರದಾಡಬೇಕಾದ ಸ್ಥಿತಿಯಿತ್ತು. ಕೊರೊನಾ ದಿಂದ ಸಾವನ್ನಪ್ಪಿದ ರೋಗಿಗಳ ಶವಗಳನ್ನು ಜೆಸಿಬಿಯಲ್ಲೋ, ಅಥವಾ ಇತರ ವಾಹನಗಳಲ್ಲಿ ಸಾಗಿಸಿ ಅಂತ್ಯ ಸಂಸ್ಕಾರವನ್ನೂ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಫೀಲ್ಡ್ ಗೆ ಇಳಿದಿದ್ದ ಈ ತಂಡ ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರನ್ನು ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಿದ ಶ್ರೇಯಸ್ಸೂ ಈ ತಂಡಕ್ಕಿದೆ.

    ಮನೆಯಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿಯನ್ನು ಹೊರತುಪಡಿಸಿ ಉಳಿದೆಲ್ಲಾ ಕುಟುಂಬ ಸದಸ್ಯರು ಅಂತ್ಯ ಸಂಸ್ಕಾರದ ವಿಧಿಗಳಿಂದ ದೂರ ಉಳಿದಿದ್ದ ಸಂದರ್ಭದಲ್ಲಿ ಈ ತಂಡ ಆ ಕುಟುಂಬಕ್ಕೆ ಸಾಂತ್ವಾನ ಹೇಳಿ ಅಂತ್ಯ ಸಂಸ್ಕಾರ ನಡೆಸಿ ಮೊದಲ ಬಾರಿಗೆ ತಮ್ಮ ಸೇವಾಭಾವವನ್ನು ತೋರ್ಪಡಿಸಿತ್ತು. ಅಲ್ಲದೆ ಇತ್ತೀಚೆಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪುತ್ತೂರಿಗೆ ಸಂಬಂಧಪಟ್ಟ ವ್ಯಕ್ತಿಯೊಬ್ಬರು ಮೃತಪಟ್ಟ ಸಂದರ್ಭದಲ್ಲಿ ಮೃತರ ಕುಟುಂಬಸ್ಥರು ಇದೇ ತಂಡವನ್ನು ಸಂಪರ್ಕಿಸಿ ಅಂತ್ಯ ಸಂಸ್ಕಾರ ನಡೆಸಲು ಮನವಿ ಮಾಡಿತ್ತು. ಈ ಹಿನ್ನಲೆಯಲ್ಲಿ ರಾತ್ರಿ ವೇಳೆಯಲ್ಲಿಯೇ ಮೃತ ವ್ಯಕ್ತಿಯ ಶವಸಂಸ್ಕಾರ ನಡೆಸಲಾಗಿತ್ತು. ಕೋವಿಡ್ ನಿರ್ವಹಣೆಯ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಈ ತಂಡ ಕೋವಿಡ್-19 ನಿಂದ ಮೃತಪಟ್ಟ ರೋಗಿಗಳ ಶವಸಂಸ್ಕಾರವನ್ನು ನಡೆಸುತ್ತಿದೆ.

    ಅಲ್ಲದೆ ಎಲ್ಲಾ ಸಂದರ್ಭದಲ್ಲಿ ಈ ಸೇವೆಗೆ ಸದಾ ಸಿದ್ಧವಿರಬೇಕು ಎನ್ನುವ ಕಾರಣಕ್ಕೆ ಸಾಕಷ್ಟು ಜೊತೆ ಪಿಪಿ ಕಿಡ್, ಮಾಸ್ಕ್ , ಹ್ಯಾಂಡ್ ಗ್ಲೌಸ್ ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದೆ ಎನ್ನುತ್ತಾರೆ ಸಿವಿಲ್ ಎಂಜಿನಿಯರ್ ಹಾಗೂ ಕೋವಿಡ್ ಅಂತ್ಯಸಂಸ್ಕಾರ ನಿರ್ವಹಿಸುತ್ತಿರುವ ತಂಡದ ಸದಸ್ಯ ಪಿ.ಜಿ.ಜಗನ್ನಿವಾಸ್ ರಾವ್. ವೃತ್ತಿಯಲ್ಲಿ ಎಂಜಿನಿಯರ್ ಹಾಗೂ ಇತರ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿರುವ ಈ ತಂಡದ ಸದಸ್ಯರು ಅಗತ್ಯವಿರುವವರ ಸೇವೆಗೆ ನಿರಂತರವಾಗಿ ಸಿದ್ಧವಾಗಿದ್ದಾರೆ. ಯಾವುದೇ ಪ್ರಚಾರ ಹಾಗೂ ಇತರ ಸಂಭಾವನೆಗಳನ್ನು ಬಯಸದೆ ಅಂತ್ಯಸಂಸ್ಕಾರ ನಡೆಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಈ ವ್ಯವಸ್ಥೆಯಲ್ಲಿ ಯಾವುದೇ ಜಾತಿ, ಧರ್ಮವನ್ನು ನೋಡದೆ ಕಾರ್ಯನಿರ್ವಹಿಸುವ ಈ ತಂಡ ಯಾವುದೇ ಸಮಯದಲ್ಲಿ, ಎಲ್ಲಿಂದ ಕರೆ ಬಂದರೂ ಶವಸಂಸ್ಕಾರಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply