Connect with us

DAKSHINA KANNADA

ಅನಾಥ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿಸುವ ಕಾರ್ಪೋರೇಟರ್​ ಗಣೇಶ್ ಕುಲಾಲ್

ಮಂಗಳೂರು, ಮೇ 04: ಕೊರೊನಾ ಸೋಂಕಿಗೆ ದಿನದಿಂದ ದಿನಕ್ಕೆ ಮೃತಪಟ್ಟವರ ಸಂಖ್ಯೆ ಅಧಿಕವಾಗುತ್ತಿದೆ. ಇಂತಹ ಮೃತದೇಹಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ಮುಂದೆ ಬರುವವರ ಸಂಖ್ಯೆಯು ಬಹಳ ವಿರಳವಾಗುತ್ತಿದೆ. ಸ್ವತಃ ರಕ್ತಸಂಬಂಧಿಗಳೇ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸದೆ ಶವವನ್ನು ಅನಾಥರನ್ನಾಗಿಸಿದ ಅನೇಕ ಪ್ರಕರಣಗಳು ವರದಿಯಾಗುತ್ತಿವೆ.

ಇಂತಹ ಅಮಾನವೀಯ ಜನರ ನಡುವೆಯೂ ಮಂಗಳೂರು ಮನಪಾ ಕಾರ್ಪೋರೇಟರ್​ ವಾರಸುದಾರರಿಲ್ಲದ, ಅಂತ್ಯ ಸಂಸ್ಕಾರ ನೆರವೇರಿಸಲು ಯಾರೂ ಮುಂದೆ ಬಾರದ ಮೃತದೇಹಗಳಿಗೆ ಸ್ವತಃ ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 26ನೇ ನೈರುತ್ಯ ವಾರ್ಡ್ ದೇರೆಬೈಲ್​ನ ಕಾರ್ಪೋರೇಟರ್ ಆಗಿರುವ ಗಣೇಶ್ ಕುಲಾಲ್ ಎಂಬುವರು ಕಳೆದ ಎರಡು ವಾರಗಳಿಂದ ಈ ಕಾರ್ಯ ಮಾಡುತ್ತಿದ್ದಾರೆ. ಇವರು ಕಳೆದ ಎರಡು ವಾರಗಳಲ್ಲಿ ವಾರಸುದಾರರಿಲ್ಲದ 12 ಮೃತದೇಹಗಳಿಗೆ ಸ್ವತಃ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈವರೆಗೆ ಗಣೇಶ್ ಕುಲಾಲ್ ಅಂತ್ಯ ಸಂಸ್ಕಾರ ನೆರವೇರಿಸಿರುವ 12 ಮೃತದೇಹಗಳಲ್ಲಿ 9 ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರೆನ್ನುವುದು ಮತ್ತೊಂದು ವಿಶೇಷ. ಉಳಿದ ಮೂರು ಮಂದಿ ಇತರೆ ಕಾರಣದಿಂದ ಮೃತಪಟ್ಟವರು.

ಇದರಲ್ಲಿ ಕೇರಳ ರಾಜ್ಯದ ಹಾಗೂ ಮಡಿಕೇರಿ ಜಿಲ್ಲೆಯ ವಾರಿಸುದಾರರಿಲ್ಲದ, ಅಂತ್ಯಕ್ರಿಯೆಗೆ ಕುಟುಂಬಸ್ಥರು ಮುಂದೆ ಬಾರದ ಎರಡು ಮೃತದೇಹಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಉಳಿದ ಮೃತದೇಹಗಳು ಮಂಗಳೂರು ತಾಲೂಕಿಗೆ ಸಂಬಂಧಪಟ್ಟವರದ್ದೇ ಆಗಿವೆ. 12ರಲ್ಲಿ ಐವರು ಮಹಿಳೆಯರಾಗಿದ್ದು, ಉಳಿದ ಏಳು ಮಂದಿ ಪುರುಷರಾಗಿದ್ದಾರೆ.‌ ಈ ಮೃತದೇಹಗಳನ್ನು ನಂದಿಗುಡ್ಡೆ ಹಾಗೂ ಬೋಳೂರು ಚಿತಾಗಾರದಲ್ಲಿ ಅಂತ್ಯ ಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಿದ್ದಾರೆ.

ದ.ಕ ಜಿಲ್ಲೆಯ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರ ವಾರ್ ರೂಂನ ಜವಾಬ್ದಾರಿಯನ್ನೂ ಹೊಂದಿರುವ ಗಣೇಶ್ ಕುಲಾಲ್ ಅವರು, ಬರೀ ಮೃತದೇಹಕ್ಕೆ ಅಂತ್ಯ ಸಂಸ್ಕಾರ ಮಾತ್ರವಲ್ಲದೆ, ಅಗತ್ಯವಿರುವವರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ, ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಉಚಿತ ವ್ಯವಸ್ಥೆ ಮಾಡಿದ್ದಾರೆ. ಇಂತಹ ಅನೇಕ ಕರೆಗಳೂ ಅವರಿಗೆ ಬರುತ್ತಿದ್ದು, ಎಲ್ಲದ್ದಕ್ಕೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರಂತೆ. ಕೊರೊನಾ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲು ಯಾರೂ ಮುಂದೆ ಬಾರದಿರುವ ಈ ಕಾಲದಲ್ಲಿ ಕಾರ್ಪೋರೇಟರ್ ಗಣೇಶ್ ಕುಲಾಲ್ ಅವರ ಮಾನವೀಯ ಕಾರ್ಯ ಮೆಚ್ಚುವಂತದ್ದಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *