DAKSHINA KANNADA
ಕೃಷ್ಣ ಜೆ ರಾವ್ ಜೊತೆ ಸೆಲ್ಫಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಜ್ವಲ್ ಘಾಟೆ ಸ್ಪಷ್ಟನೆ

ಪುತ್ತೂರು ಜುಲೈ 04: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮಗು ಕರುಣಿಸಿ ಇದೀಗ ನಾಪತ್ತೆಯಾಗಿರುವ ಆರೋಪಿ ಕೃಷ್ಣ ಜೆ ರಾವ್ ಜೊತೆ ಪುತ್ತಿಲ ಪರಿವಾರದ ಕಾರ್ಯಕರ್ತ ಹಾಗೂ ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರ ಜೊತೆಗಿರುವ ಸೆಲ್ಫಿ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಪೋಟೋ ಕುರಿತಂತೆ ಸ್ಪಷ್ಟನೆ ನೀಡಿರುವ ಪ್ರಜ್ವಲ್ ಘಾಟೆ ಇದು ಹಳೆಯ ಪೋಟೋ ಇದೀಗ ವೈರಲ್ ಆಗಿದೆ ಎಂದಿದ್ದಾರೆ.
ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿ ಮಗು ಕರುಣಿಸಿ ಇದೀಗ ಯುವಕ ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಎಂಬವರ ಪುತ್ರ ಕೃಷ್ಣ ಜೆ ರಾವ್ ನಾಪತ್ತೆಯಾಗಿದ್ದಾನೆ. ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಪುತ್ತಿಲ ಪರಿವಾರದ ಕಾರ್ಯಕರ್ತ, ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಜ್ವಲ್ ಘಾಟೆ ಕಾರಿನಲ್ಲಿ ಕುಳಿತುಕೊಂಡು ತೆಗೆದಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಿನ ಮುಂಭಾಗದಲ್ಲಿ ಪ್ರಜ್ವಲ್ ಘಾಟೆ ಕುಳಿತಿದ್ದು, ಹಿಂಭಾಗದಲ್ಲಿ ಆರೋಪಿ ಕೃಷ್ಣ ರಾವ್ ಕುಳಿತಿರುವುದು ಕಂಡು ಬರುತ್ತಿದೆ.

ಈ ಪೋಟೋ ವೈರಲ್ ಆಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಜ್ವಲ್ ಘಾಟೆ “ಇಂದು ಬೆಳಗ್ಗಿನಿಂದ ನನ್ನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು 2023ರ ಎಪ್ರಿಲ್ ತಿಂಗಳ ಚುನಾವಣೆಯ ಸಂದರ್ಭದಲ್ಲಿ ನಾನೇ ತೆಗೆದ ಫೋಟೊ. ಬಿಜೆಪಿ ಮುಖಂಡನ ಪುತ್ರನ ಅತ್ಯಾಚಾರ, ವಂಚನೆ ಪ್ರಕರಣಕ್ಕೆ ಈ ಫೋಟೊವನ್ನು ಲಿಂಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗುತ್ತಿದೆ. ಇದು ನನಗೆ ತುಂಬಾ ಬೇಸರ ತಂದಿದೆ. ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಹಾಗು ಪೊಲೀಸರ ಯಾವುದೇ ತನಿಖೆಗೆ ನಾನು ಸಿದ್ಧನಿದ್ದೇನೆ” ಎಂದು ಪುತ್ತಿಲ ಪರಿವಾರದ ಕಾರ್ಯಕರ್ತ ಹಾಗೂ ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪ್ರಜ್ವಲ್ ಘಾಟೆ ತಿಳಿಸಿದ್ದಾರೆ.
1 Comment