KARNATAKA
ಬಟ್ಟೆ ಕ್ಲೀನ್ ಇಲ್ಲ ಎಂದು ರೈತನನ್ನು ತಡೆದ ಮೆಟ್ರೋ ಸಿಬ್ಬಂದಿ..!!
ಬೆಂಗಳೂರು ಫೆಬ್ರವರಿ 26: ಬೆಂಗಳೂರಿನ ನಮ್ಮ ಮೆಟ್ರೋ ಸಿಬ್ಬಂದಿ ಮಾನವೀಯತೆಯನ್ನು ಮರೆತಿದ್ದು, ರೈತನೊಬ್ಬನ ಬಟ್ಟೆ ಕೊಳಕಾಗಿದೆ ಎಂದು ಆತನನ್ನು ತಡೆದು ಅವಮಾನಿಸಿದ ಘಟನೆ ಬೆಂಗಳೂರಿನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈತನೊಬ್ಬ ತನ್ನ ಮೂಟೆಯೊಂದಿಗೆ ರಾಜಾಜಿನಗರ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಈ ವೇಳೆ ಆತನ ಬಟ್ಟೆ ಕೊಳಕಾಗಿದೆ ಎಂದು ಅಲ್ಲಿನ ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಕಿಡಿಕಾರಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗುತ್ತೆ ಅಂತ ಒಳಗೆ ಬಿಡ್ತಿಲ್ಲ ಅಂತ ಪ್ರಯಾಣಿಕರಿಗೆ ಆಕ್ರೋಶ ಹೊರ ಹಾಕಿದ್ದಾರೆ. ಕೊನೆಗೆ ಸಿಬ್ಬಂದಿಗೆ ಕ್ಯಾರೇ ಮಾಡದೇ ಸಹ ಪ್ರಯಾಣಿಕರೇ ರೈತರನ್ನು ಕರೆದುಕೊಂಡು ಹೋಗಿದ್ದಾರೆ. ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಮಾಡಲಾಗಿದೆ. ಬಿಎಂಆರ್ಸಿಎಲ್ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರನಾ ಮೆಟ್ರೋ ಅಂತ ಕಿಡಿಕಾರಿದ್ದಾರೆ. ರೈತ ಬೆಳೆ ಬೆಳೆದಿಲ್ಲ ಅಂದ್ರೆ ನೀವು ಏನು ತಿಂತೀರಾ ಅಂತ ಜನರು ಪ್ರಶ್ನೆ ಮಾಡಿದ್ದಾರೆ. ಮೆಟ್ರೋ ಸಿಬ್ಬಂದಿಗಳ ವಿರುದ್ಧ ಕ್ರಮಕ್ಕೆ ಟ್ವಿಟರ್ ಬಳಕೆದಾರರು ಆಗ್ರಹಿಸಿದ್ದಾರೆ. ಸಿಬ್ಬಂದಿಯ ಈ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಈ ಮೂಲಕ ರೈತನನ್ನ ಅಪಮಾನ ಮಾಡಿದ್ದ ಮೆಟ್ರೋ ಸಿಬ್ಬಂದಿ ಸಸ್ಪೆಂಡ್ ಮಾಡಲಾಗಿದೆ.