Connect with us

FILM

ಡೆವಿಲ್‌ ಚಿತ್ರದ ಶೂಟಿಂಗ್‌ಗೆ ವಿದೇಶಕ್ಕೆ ತೆರಳಲು ನಟ ದರ್ಶನ್‌ಗೆ ಅನುಮತಿ

ಬೆಂಗಳೂರು, ಮೇ.31: ‘ಡೆವಿಲ್‌’ ಚಿತ್ರದ ಚಿತ್ರೀಕರಣಕ್ಕೆ ಜೂ.1ರಿಂದ 25ರವರೆಗೆ ದುಬೈ ಹಾಗೂ ಯೂರೋಪ್‌ಗೆ ತೆರಳಲು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್‌ಗೆ ನಗರದ 64ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಅನುಮತಿ ನೀಡಿದೆ.

ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರು ಈ ಆದೇಶ ಮಾಡಿದ್ದಾರೆ.

ಡೆವಿಲ್‌ ಚಿತ್ರ ನಿರ್ಮಿಸುತ್ತಿರುವ ಜೈಮಾತಾ ಕಂಬೈನ್ಸ್‌ನ ಕಾರ್ಯಕಾರಿ ನಿರ್ಮಾಪಕರು ಚಿತ್ರೀಕರಣಕ್ಕಾಗಿ 2025ರ ಜು.1ರಿಂದ 25ರವರೆವರೆಗೆ ದರ್ಶನ್ ಅವರ ಉಪಸ್ಥಿತಿಯ ಅಗತ್ಯವಿದೆ ಎಂದು ತಿಳಿಸಿ ಪತ್ರ ನೀಡಿದ್ದಾರೆ. ಚಿತ್ರೀಕರಣ ಪೂರ್ಣಗೊಂಡ ನಂತರ ದರ್ಶನ್‌ ಭಾರತಕ್ಕೆ ಮರಳುವುದಾಗಿ ಭರವಸೆ ನೀಡಿದ್ದಾರೆ. ವಿದೇಶಕ್ಕೆ ಪ್ರಯಾಣಿಸುವುದು ಸಂವಿಧಾನದ ಪರಿಚ್ಛೇದ 21 ಅಡಿಯ ಮೂಲಭೂತ ಹಕ್ಕು ಎಂದು ಸುಪ್ರಿಂ ಕೋರ್ಟ್‌ 1978ರಲ್ಲಿ ಪ್ರಕರಣವೊಂದರಲ್ಲಿ ಆದೇಶಿಸಿದೆ. ದರ್ಶನ್‌ ಕನ್ನಡ ಚಿತ್ರರಂಗದ ನಟನಾಗಿದ್ದಾರೆ. ನಟನೆ ಮೂಲಕವೇ ಕುಟುಂಬದ ಆದಾಯಗಳಿಸುವ ಸದಸ್ಯರಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ (ಟ್ರಯಲ್‌) ಆರಂಭವಾಗಬೇಕಿದೆ. ಹಾಗಾಗಿ, ಮುಂದಿನ ವಿಚಾರಣೆ ವೇಳೆ ಹಾಜರಾಗಬೇಕೆಂಬ ಷರತ್ತು ವಿಧಿಸಿ ವಿದೇಶಕ್ಕೆ ತೆರಳಲು ದರ್ಶನ್‌ಗೆ ಅನುಮತಿ ನೀಡುವುದು ಸೂಕ್ತ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಂತಿಮವಾಗಿ ಜು.1ರಿಂದ 25ರವರೆಗೆ ದರ್ಶನ್‌ ವಿದೇಶಕ್ಕೆ ತೆರಳಬಹುದು. ಆದರೆ, ಯಾವುದೇ ವಿನಾಯ್ತಿ ಕೋರದೆ ವಿದೇಶದಿಂದ ಬಂದ ನಂತರ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ವಿಚಾರಣೆ ವೇಳೆ ದರ್ಶನ್‌ ಪರ ವಕೀಲ, ಪ್ರಕರಣ ಸಂಬಂಧ ಜಾಮೀನು ನೀಡಿರುವ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಹೊರ ಹೋಗಬೇಕಾದರೆ ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಿದೆ. ದರ್ಶನ್‌ ನಟರಾಗಿದ್ದು, ಅವರ ವೃತ್ತಿಯೇ ಕುಟುಂಬದ ಜೀವನಾಧಾರ. ಡೆವಿಲ್‌ ಚಿತ್ರದ ಚಿತ್ರೀಕರಣವು ದುಬೈ ಮತ್ತು ಯುರೋಪ್‌ನಲ್ಲಿ ನಡೆಯಲಿದೆ. ಹಾಗಾಗಿ, ಜು.7ರಿಂದ 25ರವರೆಗೆ ವಿದೇಶಕ್ಕೆ ತೆರಳಲು ದರ್ಶನ್‌ಗೆ ಅನುಮತಿ ನೀಡಬೇಕು ಎಂದು ಕೋರಿದ್ದಾರೆ.

ಈ ಮನವಿ ಆಕ್ಷೇಪಿಸಿದ್ದ ಪೊಲೀಸರ ಪರ ವಕೀಲರು, ದರ್ಶನ್‌ ಅತ್ಯಂತ ಪ್ರಭಾವಿ ಮತ್ತು ಆರ್ಥಿಕವಾಗಿ ಸದೃಢವಾಗಿದ್ದಾರೆ. ವಿದೇಶಕ್ಕೆ ತೆರಳಲು ಅನುಮತಿ ಕೋರಿದರೆ, ಮತ್ತೆ ಈ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ. ವಿದೇಶಕ್ಕೆ ತೆರಳಲು ದರ್ಶನ್‌ ನೀಡಿರುವ ಕಾರಣ ತೃಪ್ತಿಕರವಾಗಿಲ್ಲ. ಹಾಗಾಗಿ, ಆತನ ಮನವಿ ತಿರಸ್ಕರಿಸಬೇಕು ಎಂದು ಕೋರಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು 25 ದಿನಗಳ ಕಾಲ ವಿದೇಶಕ್ಕೆ ತೆರಳಲು ದರ್ಶನ್‌ಗೆ ಅನುಮತಿ ನೀಡಿ ಆದೇಶಿಸಿದೆ.

Share Information
Continue Reading
Advertisement
4 Comments

4 Comments

    Leave a Reply

    Your email address will not be published. Required fields are marked *