LATEST NEWS
ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡುವ ನಳಿನ್ ಕುಮಾರ್ ಸಂಸದರಾಗದಂತೆ ತಡೆಯಬೇಕು – ಡಿ.ಕೆ ಶಿವಕುಮಾರ್
ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡುವ ನಳಿನ್ ಕುಮಾರ್ ಸಂಸದರಾಗದಂತೆ ತಡೆಯಬೇಕು – ಡಿ.ಕೆ ಶಿವಕುಮಾರ್
ಮಂಗಳೂರು ಎಪ್ರಿಲ್ 15: ಜಿಲ್ಲೆಯ ಸಮಸ್ಯೆ ಬಗ್ಗೆ ಒಂದು ದಿನವೂ ಸಂಸತ್ತಿನಲ್ಲಿ ದನಿ ಎತ್ತದ ಸಂಸದ ನಳಿನ್ ಕುಮಾರ್ ಕಟೀಲ್ ಹತ್ತು ವರ್ಷಗಳಿಂದ ದಕ್ಷಿಣ ಕನ್ನಡ ಸಂಸದರಾಗಿದ್ದಾರೆ. ಈ ಅವಧಿಯಲ್ಲಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದರ ವರದಿ ಮಂಡಿಸಲಿ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯ ಸಮಸ್ಯೆಗಳ ಕುರಿತು ನಳಿನ್ ಕುಮಾರ್ ಕಟೀಲ್ ಒಂದು ದಿನವೂ ಸಂಸತ್ತಿನಲ್ಲಿ ದನಿ ಎತ್ತಲಿಲ್ಲ. ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡುತ್ತಾರೆ. ಇಂತಹವರು ಜಿಲ್ಲೆಗೆ ಸಂಸದರಾಗದಂತೆ ತಡೆಯಬೇಕು. ಉತ್ಸಾಹಿ ಯುವಕ, ಎಲ್ಲ ಜಾತಿ, ಧರ್ಮದ ಜನರನ್ನು ಒಟ್ಟಿಗೆ ಕರೆದೊಯ್ಯಬಲ್ಲ ಮಿಥುನ್ ರೈ ಅವರಿಗೆ ಜಿಲ್ಲೆಯ ಜನರು ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.
ವಿಜಯ ಬ್ಯಾಂಕ್ ವಿಲೀನದ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಒಟ್ಟಾಗಿ ರಾಜ್ಯದ 28 ಸಂಸದರ ನಿಯೋಗ ಕರೆದೊಯ್ದು ಒತ್ತಡ ಹೇರಿದ್ದರೆ ವಿಜಯ ಬ್ಯಾಂಕ್ ವಿಲೀನ ಆಗುತ್ತಿರಲಿಲ್ಲ. ಜಿಲ್ಲೆಗೆ ಸಂಬಂಧಿಸಿದ ಇವರು ಅಂತಹ ಪ್ರಯತ್ನವನ್ನೇ ಮಾಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಭಿಮಾನ ಉಳಿಸಲು ಸಾಧ್ಯವಾಗದ ಇವರು ರಾಜೀನಾಮೆ ನೀಡಬೇಕಿತ್ತು ಎಂದರು.
ಹಿಂದಿನ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸುಳ್ಳಿನ ಆಧಾರದಲ್ಲಿ ಸರ್ಕಾರ ರಚಿಸಿತ್ತು. ಈ ಬಾರಿ ಅದು ಸಾಧ್ಯವಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಒಂದಂಕಿಗಿಂತ ಹೆಚ್ಚು ಸ್ಥಾನ ಗಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಬಿಡುವುದಿಲ್ಲ’ ಎಂದರು.