ಕರಾವಳಿಗರಿಗೆ ತಿಳುವಳಿಕೆ ಇಲ್ಲ ಎಂದ ಮುಖ್ಯಮಂತ್ರಿಗೆ ದ್ವಿತೀಯ ಪಿಯುಸಿ ರಿಸಲ್ಟ್ ಟ್ವೀಟ್ ಮಾಡಿದ ನಳಿನ್ ಕುಮಾರ್ ಕಟೀಲ್

ಮಂಗಳೂರು ಎಪ್ರಿಲ್ 15: ಬಿಜೆಪಿ ಪಕ್ಷವನ್ನು ಬೆಂಬಲಿಸುವ ಕರಾವಳಿಗರಿಗೆ ತಿಳುವಳಿಕೆ ಇಲ್ಲ ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಅವರಿಗೆ ದಕ್ಷಿಣಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟರ್ ನಲ್ಲಿ ಟಾಂಗ್ ನೀಡಿದ್ದಾರೆ.

ಇತ್ತೀಚಿಗೆ ಬಿಜೆಪಿಯನ್ನು ಬೆಂಬಲಿಸುವ ಕರಾವಳಿಯ ಜನರಿಗೆ ತಿಳುವಳಿಕೆ ಕಡಿಮೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರವಲ್ಲದೆ ಮಂಗಳೂರು ಉಡುಪಿ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಇಂದು ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಟ್ವೀಟ್ ಮಾಡಿದ ನಳಿನ್ ಕುಮಾರ್ ಕುಮಾರಸ್ವಾಮಿ ಅವರ ಕಾಲೆಳೆದಿದ್ದಾರೆ. ದ್ವೀತಿಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು , ಕರಾವಳಿ ಜಿಲ್ಲೆಗಳಾದ ಉಡುಪಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣಕನ್ನಡ ಜಿಲ್ಲೆ ದ್ವೀತಿಯ ಸ್ಥಾನ ಪಡೆದಿದೆ.

ಕರಾವಳಿಯ ಜನರಿಗೆ ತಿಳುವಳಿಕೆ ಇಲ್ಲ ಎಂದು ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ, ದ್ವಿತೀಯ ಪಿಯುಸಿ ಫಲಿತಾಂಶ ಒಮ್ಮೆ ನೋಡಿ, ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನದಲ್ಲಿದ್ದು, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈನ್ನು ಕರಾವಳಿಯ ಜಿಲ್ಲೆಗಳೇ ಸಾಧಿಸಿದೆ.

‘ಮುಖ್ಯಮಂತ್ರಿಯವರೇ ಇದೀಗ ಕ್ಷಮೆ ಕೇಳುವ ಸಮಯ ಬಂದಿದೆ ‘ ಎಂದು ಟ್ವಿಟರ್ ನಲ್ಲಿ ನಳಿನ್ ಕುಮಾರ್ ಕಟೀಲ್ ಸಿಎಂ ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದ್ದಾರೆ.

ಫಲಿತಾಂಶ ನೋಡಿ, ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ ? ಎಂದು ಸೋಮವಾರ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲೇ ಟ್ವೀಟ್ ಮಾಡಿ ಸಿಎಂ ಕರಾವಳಿಗರ ಕ್ಷಮೆ ಯಾಚಿಸುವಂತೆ ನಳಿನ್ ಆಗ್ರಹಿಸಿದ್ದಾರೆ.