ಉಡುಪಿ ಮೇ 07: ಕಾರು ಚಾಲಕನ ಅಜಾಗರೂಕತೆಯ ಚಾಲನೆಗೆ ಎಂಬಿಎ ವಿಧ್ಯಾರ್ಥಿಯೊಬ್ಬ ಸಾವನಪ್ಪಿದ ಘಟನೆ ಉಡುಪಿಯ ಕಿನ್ನಿಮುಲ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತರನ್ನು ಪ್ರಸಿದ್ಧ ಭಕ್ತಿ ಗಾಯಕ ಮತ್ತು ತಬಲಾ ವಾದಕರೂ ಆಗಿದ್ದ ಎಂಬಿಎ ವಿದ್ಯಾರ್ಥಿ ಕಿದಿಯೂರು ನಿವಾಸಿ ಸಂಕೀರ್ತನ್ (28) ಎಂದು ಗುರುತಿಸಲಾಗಿದೆ.


ಕುಂದಾಪುರದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಕಾರನ್ನು ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಘಟನೆ ಸಂಭವಿಸಿದೆ. ಕಾರು ಮೊದಲು ಗೂಡ್ಸ್ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆ ಡಿವೈಡರ್ ಏರಿ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಮತ್ತೊಂದು ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿನ ಹಿಂದೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಲ್ಲಿ ಸಂಕೀರ್ತನ್‌ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದರು. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಜನೆ ಹಾಡುಗಾರ ಕಿದಿಯೂರಿನ ಸುರೇಶ್‌ ಆಚಾರ್ಯ ಅವರ ಪುತ್ರನಾಗಿದ್ದ ಸಂಕೀರ್ತನ್‌ ತಬಲಾ, ಹಾರ್ಮೋನಿಯಂ ವಾದಕರಾಗಿದ್ದರು. ನಿತ್ಯಾನಂದ ಭಜನ ಮಂದಿರ, ಕನ್ನರ್ಪಾಡಿ ಜಯದುರ್ಗಾಪರಮೇಶ್ವರೀ, ಪ್ರಸನ್ನ ಗಣಪತಿ, ವೀರ ವಿಠಲ ದೇವಸ್ಥಾನಲ್ಲಿ ಭಜನ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು. ಪ್ರಸ್ತುತ ಅವರು ಮೂಡುಬಿದಿರೆ ಆಳ್ವಾಸ್‌ ಎಂಜಿನಿಯರ್‌ ಕಾಲೇಜಿನಲ್ಲಿ ಅಂತಿಮ ಎಂಬಿಎ ವಿದ್ಯಾರ್ಥಿಯಾಗಿದ್ದರು.

Share Information