ಮಂಗಳೂರು,ಆಗಸ್ಟ್ 02 : ಕಾಂಗ್ರೆಸ್ಸಿಗರು ಮಂಗಳೂರಿನ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ದಾಂಧಲೆ ನಡೆಸಿ ದಾಂಧಲೆ ನಡೆಸಿರುವುದನ್ನು ಬಿಜೆಪಿ ತೀವೃವಾಗಿ ಖಂಡಿಸಿದೆ. ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲಿನ ಐಟಿ ದಾಳಿಯನ್ನು ವಿರೋಧಿಸಿ ಕಾಂಗ್ರೆಸ್ಸಿಗರು ಮಂಗಳೂರಿನ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ದಾಂಧಲೆ ನಡೆಸಿ ಸರಕಾರದ ಆಸ್ತಿಗೆ ಹಾನಿ ಮಾಡಿದ್ದಲ್ಲದೇ, ಸಾರ್ವಜನಿಕ ಸ್ಥಳದಲ್ಲಿ ಟಯರ್’ಗೆ ಬೆಂಕಿ ಹಚ್ಚಿ ಜನರಲ್ಲಿ ಭಯಬೀತ ವಾತಾವರಣ ಸೃಷ್ಟಿಸಿದ್ದು ಅತ್ಯಂತ ಖಂಡನೀಯ ಎಂದು ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.ಆದಾಯ ತೆರಿಗೆ ಇಲಾಖೆಯ ಮೇಲೆ ದಾಳಿ ನಡೆಸಿ ಗಾಜುಗಳನ್ನು ಪುಡಿಗೈದು ಸೊತ್ತುಗಳಿಗೆ ಹಾನಿ ಮಾಡಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು, ಮಹಾನಗರ ಪಾಲಿಕೆಯ ಸದಸ್ಯರಾದ ಎ.ಸಿ.ವಿನಯ್ ರಾಜ್, ರಮಾನಂದ ಪೂಜಾರಿ, ಯೂತ್ ಕಾಂಗ್ರೆಸ್’ನ ಮೆರಿಲ್ ರಿಗೋ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಪೊಲೀಸರು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕೂಡ ಮಂಗಳೂರಿನ ಐಟಿ ಕಚೇರಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.ಕಾಂಗ್ರೆಸ್ ಪಕ್ಷದ ಗೂಂಡಾ ಸಂಸ್ಕೃತಿಯನ್ನು ಖಂಡಿಸಿದ ಅವರು ಕಾಂಗ್ರೆಸ್ ಪಕ್ಷದ ಕೆಲವು ಕಿಡಿಗೇಡಿಗಳು ಕಾನೂನು ಕೈಗೆತ್ತಿಕೊಂಡು ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಕಚೇರಿಗೆ ನುಗ್ಗಿ ದಾಂಧಲೆ ಯನ್ನು ನಡೆಸಿದ್ದಾರೆ.ಮಂಗಳೂರು ಕಮಿಷನರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಈ ರೀತಿಯ ಗೂಂಡಾಗಿರಿಯನ್ನು ನಡೆಸಿ ಕೇಂದ್ರ ಸರಕಾರ ಅಧಿಕಾರಿಗಳಿಗೆ ಬೆದರಿಕೆ ಹಾಗೂ ದೌರ್ಜನ್ಯ ಎಸಗಿದ ಕಾಂಗ್ರೆಸ್ ಗೂಂಡಾಗಳನ್ನು ಪೊಲೀಸರು ಕೂಡಲೇ ಬಂಧಿಸುವಂತೆ ಅವರು ಆಗ್ರಹಿಸಿದರು