ಮಂಗಳೂರು, ಜುಲೈ.19: ದೈನಂದಿನ ತ್ಯಾಜ್ಯ ವಿಲೇವಾರಿ ಮಾಡುವ ಜವಾಬ್ದಾರಿ ಪ್ರತಿ ಸ್ಥಳಿಯಾಡಳಿತದ ಜವಾಬ್ದಾರಿಯಾಗಿದೆ. ಆದರೆ ಈ ಜವಾಬ್ದಾರಿಯನ್ನು ಎಷ್ಟು ಜನ ನಿರ್ವಹಿಸುತ್ತಾರೆ ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಎರಡೂ ಬದಿಗಳಲ್ಲಿ ಇಂದು ಲಾರಿ-ಟೆಂಪೋಗಳಲ್ಲಿ ಲೋಡುಗಟ್ಟಲೆ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು, ಸಂಬಂಧಪಟ್ಟವರು ಕಣ್ಣಿದ್ದೂ ಕುರುಡರಾಗಿದ್ದು, ಕಿವಿಯಿದ್ದೂ ಕಿವುಡರಂತಾಗಿದ್ದಾರೆ.

ಇದಕ್ಕೆ ಉತ್ತಮ ಉದಾಹರಣೆ ಉಳ್ಳಾಲ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವಂತಹ ಬೀರಿ- ದೇರಳಕಟ್ಟೆ ರಸ್ತೆ. ಈ ರಸ್ತೆಯ ಇಕ್ಕೆಲಗಳಲ್ಲೂ ಘನ ಹಾಗೂ ದ್ರವ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು, ರಸ್ತೆಯ ತುಂಬಾ ಗಬ್ಬುವಾಸನೆ ನಾರುತ್ತಿದ್ದು, ಈ ರಸ್ತೆಯಲ್ಲಿ ಸಾಗುವವರು ಮಾತ್ರವಲ್ಲ ಸುತ್ತಮುತ್ತಲಿನ ಜನರೂ ಮೂಗು ಮುಚ್ಚಿ ನಡೆಯಬೇಕಾದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬೀರಿ ಜಂಕ್ಷನ್ ನ ಪಕ್ಕದಲ್ಲಿ ಹಾಗೂ ಅಲೋಶಿಯಸ್ ಇಂಜಿನಿಯರಿಂಗ್ ಕಾಲೇಜಿನ ಪಕ್ಕದಲ್ಲಿ ಸತ್ತ ಕೋಳಿ, ಮಾಂಸ ತ್ಯಾಜ್ಯ ಸೇರಿದಂತೆ ಎಲ್ಲಾ ತ್ಯಾಜ್ಯಗಳನ್ನು ಬೇಕಾ ಬಿಟ್ಟಿ ಸುರಿಯಲಾಗುತ್ತಿದ್ದು, ಸಂಬಂಧಪಟ್ಟ ಪಟ್ಟಣ ಪಂಚಾಯತ್ ಮಾತ್ರ ತನಗೂ , ಇದಕ್ಕೂ ಯಾವುದೇ ಸಂಬಂಧವೇ ಇಲ್ಲದಂತಾಡುತ್ತಿದೆ. ಪ್ರಸ್ತುತ ಸ್ಥಳದಲ್ಲಿ ತ್ಯಾಜ್ಯಗಳನ್ನು ಸುರಿಯಬಾರದೆಂದು ಎರಡು ತಿಂಗಳ ಹಿಂದೆ ಬೋರ್ಡ್ ಹಾಕಿ ಹೋಗಿದ್ದರೂ, ತ್ಯಾಜ್ಯಗಳ ವಿಲೇವಾರಿಗೆ ಯಾವ ಪರ್ಯಾಯ ಕ್ರಮವನ್ನೂ ಕೈಗೊಂಡಿಲ್ಲ. ಈ ಕಾರಣಕ್ಕಾಗಿ ಜನ ಮತ್ತೆ ಮತ್ತೆ ಅದೇ ಸ್ಥಳದಲ್ಲಿ ತ್ಯಾಜ್ಯಗಳನ್ನು ಸುರಿಯುವುದನ್ನು ಮುಂದುವರಿಸಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ಈ ತ್ಯಾಜ್ಯಗಳು ಜನರ ಆರೋಗ್ಯದ ಮೇಲೂ ಪರಿಣಾಮವನ್ನು ಉಂಟು ಮಾಡಲಿದ್ದು, ವಿವಿಧ ರೋಗಗಳು ಹರಡುವ ಭೀತಿಯೂ ಇದೆ. ಅಲ್ಲದೆ ತ್ಯಾಜ್ಯ ಸುರಿಯುವ ಸ್ಥಳದ ತುಂಬಾ ಬೀದಿ ನಾಯಿಗಳ ಕಾಟವೂ ಶುರುವಾಗಿದ್ದು, ಜನ ಸುರಿದ ತ್ಯಾಜ್ಯಗಳ ಪೊಟ್ಟಣವನ್ನು ರಸ್ತೆ ತುಂಬಾ ಚೆಲ್ಲಾಡುವ ಕಾರ್ಯದಲ್ಲೂ ಈ ನಾಯಿಗಳು ನಿರತವಾಗಿವೆ. ಹಸಿ ಮಾಂಸದ ತಾಜ್ಯವನ್ನು ಆಹಾರವಾಗಿ ತಿನ್ನುವ ಈ ಬೀದಿ ನಾಯಿಗಳಿಂದ ಮಕ್ಕಳು ಹಾಗೂ ವೃದ್ದರಿಗೆ ಅಪಾಯ ಕಟ್ಟಿಟ್ಟ ಬುತ್ತಿ.!!
ಪ್ರತಿದಿನ ತ್ಯಾಜ್ಯ ವಿಲೇವಾರಿ ನಡೆಸಬೇಕಾದ ಪಟ್ಟಣ ಪಂಚಾಯತ್ ಮಾತ್ರ ಇದೀಗ ವಾರಕ್ಕೆರಡು ಬಾರಿ ತ್ಯಾಜ್ಯಗಳನ್ನು ರಸ್ತೆ ಬದಿಯಿಂದ ಸಂಗ್ರಹಿಸುತ್ತಿದೆ. ಆದರೆ ಆ ಎರಡು ವಾರಗಳ ಮಧ್ಯೆ ರಸ್ತೆಯಲ್ಲಿ ಸಂಚರಿಸುವ ಜನ ಹಾಗೂ ರಸ್ತೆ ಬದಿಯಲ್ಲಿರುವ ಮನೆಗಳ ಜನ ಮಾತ್ರ ನರಕಯಾತನೆಯನ್ನೇ ಅನುಭವಿಸುತ್ತಿದ್ದಾರೆ. ಇನ್ನಾದರೂ ಪಟ್ಟಣ ಪಂಚಾಯತ್ ಈ ಕುರಿತು ಗಮನಹರಿಸಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಬೇಕಾಗಿದೆ. ಎಲ್ಲಾ ಪ್ರಕಾರದ ತ್ಯಾಜ್ಯಗಳನ್ನು ರಸ್ತೆಯ ಪಕ್ಕದಲ್ಲೇ ಸುರಿಯುವುದ ಕೆಟ್ಟ ಪರಿಣಾಮ ಜನರ ಆರೋಗ್ಯದ ಮೇಲೆ ಆಗುವ ಮೊದಲೇ ಅಧಿಕಾರಿಗಳು ಹಾಗೂ ಆಡಳಿತವರ್ಗ ಎಚ್ಚೆತ್ತುಕೊಳ್ಳಬೇಕಿದೆ. ರೈಲು ಹೋದ ಮೇಲೆ ಟಿಕೆಟ್ ತೆಗೆಯುವ ಸಂಸ್ಕೃತಿ ನಿಲ್ಲಬೇಕಿದೆ.