Connect with us

    DAKSHINA KANNADA

    ಮಂಗಳೂರು ಸಿಎಎ ಗಲಭೆ ಆರೋಪಿಗಳಿಗೆ ಜಾಮೀನು: ಸುಪ್ರೀಂಕೋರ್ಟ್ ಆದೇಶ

    ನವದೆಹಲಿ: ರಾಷ್ಟ್ರೀಯ ಪೌರತ್ವ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ವಿರೋಧಿಸಿ ನಡೆಸಿದ್ದ ಪ್ರತಿಭಟನೆ ಹಾಗೂ ಹಿಂಸಾಚಾರ ಘಟನೆಯ ಎಲ್ಲ 21 ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಕಾಯ್ದೆಗಳನ್ನು ವಿರೋಧಿಸಿ 2019ರ ಡಿಸೆಂಬರ್​ನಲ್ಲಿ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿತ್ತು. ಆದರೆ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಸಾವಿಗೀಡಾಗಿದ್ದರು. ಪ್ರಕರಣದಲ್ಲಿ ಆರೋಪಿಯಾದ ಮಹಮ್ಮದ್ ಆಸಿಕ್ ಸೇರಿ 21 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

    ಫೆ.17ರಂದು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತಾದರೂ, ಇದನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಹೀಗಾಗಿ, ಜಾಮೀನಿಗೆ ಮಾ.6ರಂದು ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಪ್ರಕರಣದ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ಮಧ್ಯಂತರ ತಡೆ ತೆರವುಗೊಳಿಸಿ ಷರತ್ತುಬದ್ಧ ಜಾಮೀನು ನೀಡುವುದಾಗಿ ತಿಳಿಸಿತು. 14 ದಿನಕ್ಕೊಮ್ಮೆ ಪ್ರತಿ ಸೋಮವಾರದಂದು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ವರದಿ ಮಾಡಬೇಕು ಎಂದು ಆರೋಪಿಗಳಿಗೆ ಸೂಚಿಸಿದ ನ್ಯಾಯಪೀಠ, ಬಿಡುಗಡೆಗೆ ಮುನ್ನ ಪ್ರತಿಯೊಬ್ಬರೂ 25000 ರೂ. ಜಾಮೀನು ಬಾಂಡ್​ಗಳನ್ನು ನೀಡಬೇಕು. ಅಲ್ಲದೆ, ಮುಂದೆಂದೂ ಹಿಂಸಾಚಾರ ಚಟುವಟಿಕೆ ಅಥವಾ ಸಭೆಗಳಲ್ಲಿ ಭಾಗವಹಿಸುವಂತಿಲ್ಲ ಎಂದೂ ಎಚ್ಚರಿಕೆ ನೀಡಿತು.

    ಆರೋಪಿಗಳು ಹಿಂಸಾಚಾರ ಸಂಭವಿಸಿದ ಸ್ಥಳದಲ್ಲಿದ್ದರು ಎಂಬುದು ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂದು ಜಾಮೀನು ನೀಡುವ ರಾಜ್ಯ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್, ನಾವು ಜಾಮೀನು ಮಂಜೂರು ಮಾಡುವ ವೇಳೆ ಹೈಕೋರ್ಟ್​ನ ಈ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ, ತನಿಖೆಯ ಮೇಲೂ ಈ ಅಭಿಪ್ರಾಯ ಪ್ರಭಾವ ಬೀರುವುದು ಬೇಡ ಎಂದು ಸ್ಪಷ್ಟಪಡಿಸಿದೆ. ಹೈಕೋರ್ಟ್ ಅಭಿಪ್ರಾಯದ ಬಗ್ಗೆ ಸರ್ಕಾರದ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್ ಗಮನಸೆಳೆದಿದ್ದರು.

    ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ, ಪೊಲೀಸರು ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಮೃತಪಟ್ಟರು. ಈ ಸಾವಿಗೂ ನಮಗೂ ಸಂಬಂಧವಿಲ್ಲ. ಕಳೆದ ಡಿಸೆಂಬರ್​ನಿಂದ ನಾವು ಜೈಲಿನಲ್ಲಿದ್ದೇವೆ ಮತ್ತು ತನಿಖೆಯೂ ಪೂರ್ಣಗೊಂಡಿದೆ ಎಂದು ವಾದಿಸಿದ ಆರೋಪಿಗಳ ಪರ ವಕೀಲರು, ಕರೊನಾ ಮಹಾಮಾರಿ ತಂದಿಟ್ಟಿರುವ ಪರಿಸ್ಥಿತಿಗಳನ್ನು ಗಮನಿಸಿ ಜಾಮೀನು ನೀಡಬೇಕು ಎಂದು ವಿನಂತಿಸಿಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply