LATEST NEWS
ಮಳೆ ಹಾನಿ ಉಭಯ ಜಿಲ್ಲೆಗಳಿಗೆ ಪರಿಹಾರಕ್ಕೆ 3 ಕೋಟಿ ಬಿಡುಗಡೆ – ಆರ್.ವಿ ದೇಶಪಾಂಡೆ

ಮಳೆ ಹಾನಿ ಉಭಯ ಜಿಲ್ಲೆಗಳಿಗೆ ಪರಿಹಾರಕ್ಕೆ 3 ಕೋಟಿ ಬಿಡುಗಡೆ – ಆರ್.ವಿ ದೇಶಪಾಂಡೆ
ಮಂಗಳೂರು ಜೂನ್ 14: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ಈ ಹಿನ್ನಲೆಯಲ್ಲಿ ಪ್ರಾಕೃತಿಕ ವಿಕೋಪ ಹಾನಿಯ ಹಿನ್ನಲೆಯಲ್ಲಿ ತುರ್ತು ಪರಿಹಾರಕ್ಕಾಗಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತಲಾ 3 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿರುವುದಾಗಿ ಕಂದಾಯ ಮತ್ತು ಕೌಶಲಾಭಿವೃದ್ದಿ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಉಭಯ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಾಕಷ್ಟು ಹಾನಿಗಳಾಗಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಮನೆಗಳು, ಸೊತ್ತುಗಳು ಮಳೆ, ನೆರೆಯಿಂದಾಗಿ ಹಾನಿಯಾಗಿವೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಳೆಹಾನಿ ಪರಿಹಾರಕ್ಕೆ ತಲಾ 3 ಕೋಟಿ ಬಿಡುಗಡೆ ಮಾಡಿರುವುದಾಗಿ ಹೇಳಿದ ಅವರು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪರಿಹಾರ ನೀಡಲು ಕನಿಷ್ಠ 5 ಕೋಟಿ ರೂಪಾಯಿ ಮೀಸಲಿಡುವಂತೆ ಹಾಗೂ ತುರ್ತು ಪರಿಹಾರ ಕ್ರಮಗಳು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಉಭಯ ಜಿಲ್ಲೆಗಳ ಸಂತ್ರಸ್ತರಿಗೆ ಪರಿಹಾರ ವ್ಯವಸ್ಥೆ ನೀಡಲಾಗುತ್ತಿದೆ, ಬಾಡಿಗೆ ಮನೆಯಲ್ಲಿರುವವರಿಗೂ ಪರಿಹಾರ ನೀಡುವ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಚಾರ್ಮಾಡಿ ಘಾಟ್ ನಲ್ಲಿ ಭಾರೀ ಭೂಕುಸಿತವಾಗಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಚಾರ್ಮಾಡಿಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ ಎಂದರು ಸೂಕ್ತ ವ್ಯವಸ್ಥೆಯ ಬಳಿಕ ಸಂಚಾರಕ್ಕೆ ಅನುವು ಮಾಡಲಾಗುವುದು ಎಂದರು.
ಭಾರಿ ಮಳೆಗೆ ಮರ ಬಿದ್ದು ಸಂಪೂರ್ಣ ಮನೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ನಂತರ ಆ ಮನೆಗಳ ಮಾಲಿಕರಾದ ಭವಾನಿ ಹಾಗೂ ಅನುರಾಧ ಕುಟುಂಬಕ್ಕೆ ತುರ್ತು ಪರಿಹಾರವಾಗಿ 1,01, 900 ರೂ ಚೆಕ್ ವಿತರಿಸಿದರು.