ಚೂಪಾದ ಸರಳ ಮೇಲೆ ಬಿದ್ದ ಹಾವಿನ ಮನಕಲಕುವ ದೃಶ್ಯ

ಉಡುಪಿ ಮೇ 12: ಚೂಪಾದ ಸರಳಿಗೆ ನಯವಾದ ಹಾವೊಂದು ದೊಪ್ಪನೆ ಬಿದ್ದರೆ ಹಾವಿನ ಪರಿಸ್ಥಿತಿ ಹೇಗಿರಬಹುದು. ಹಾವು ಚೂಪಾದ ಸರಳಿಗೆ ಸಿಲುಕಿರುವ ದೃಶ್ಯ ಕಂಡ್ರೆ ನಿಮಗೂ ಮನಕಲಕುತ್ತೆ.

ಬಾರೀ ಗಾತ್ರದ ಕೇರೆಹಾವು ಮನೆಯ ತಾರಸಿಯಿಂದ ದೊಪ್ಪನೆ ಬಿದ್ದದ್ದು, ನೇರಾನೇರ ಬಾಣದಂತಹಾ ಸರಳಿನ ಮೇಲೆ. ಈ ಘಟನೆ ನಡೆದದ್ದು ಮಣಿಪಾಲದಲ್ಲಿ , ಇಲ್ಲಿನ ರಾಘವೇಂದ್ರ ನಾಯ್ಕ್ ಎಂಬವರ ಮನೆಯಲ್ಲಿ. ಹಸಿದ ಗಂಡು ಕೇರೆಹಾವೊಂದು ಮನೆಯ ತಾರಸಿಯಿಂದ ಇಲಿಯ ಬೇಟೆಗಾಗಿ ಬೆನ್ನಟ್ಟುವ ಧಾವಂತದಲ್ಲಿತ್ತು. ಇದ್ದಕ್ಕಿದ್ದ ಹಾಗೆ, ಆಯತಪ್ಪಿ ಗೇಟಿನ ಚೂಪಾದ ಸರಳಿನ ಮೇಲೆಯೇ ಬಿದ್ದು ಹೊಟ್ಟೆಯೊಳಗೆ ರಾಡ್ ಹೊಕ್ಕಿಯೇ ಬಿಟ್ಟಿತು.

ಅದನ್ನು ಗಮನಿಸಿದ ಮನೆಯವರು ತಕ್ಷಣ ಉರಗ ತಜ್ಞ ಗುರುರಾಜ್ ಸನಿಲ್ ಗೆ ಸುದ್ದಿ ಮುಟ್ಟಿಸಿದರು. ಕೂಡಲೇ ಧಾವಿಸಿ ಹೋದ ಸನಿಲ್, ಹಾವನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಮೊದಲೇ ಅರೆಜೀವವಾಗಿ ಗಾಬರಿಗೊಂಡಿದ್ದ ಹಾವು ಎರಡು ಬಾರಿ ಸನಿಲ್ ರಿಗೆ ಕಚ್ಚಿದೆ. ಕೇರೆ ವಿಷರಹಿತಹಾವು. ಆದ್ದರಿಂದ ಅಪಾಯವಾಗಿಲ್ಲ.

ಮನೆಯವರು ಗುರುರಾಜ್ ಸನಿಲ್ ಬರುವ ಮೊದಲೇ ಒಂದು ಸರಳಿನಿಂದ ಹಾವನ್ನು ಮೇಲೆತ್ತಿದ್ದರು ಬಳಿಕ ಸನಿಲ್ ಅವರು ಹರಸಾಹಸಪಟ್ಟು ಮತ್ತೊಂದು ಸರಳಿನಿಂದಲೂ ನಾಜೂಕಾಗಿ ಹಾವನ್ನು ಬೇರ್ಪಡಿಸಿ ರಕ್ಷಿಸಿದ್ದಾರೆ. ಸದ್ಯ ಹಾವಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

VIDEO