ಪಲಿಮಾರು ಮಠದ ನೂತನ ಉತ್ತರಾಧಿಕಾರಿಗೆ ಪಟ್ಟಾಭಿಷೇಕ

ಉಡುಪಿ ಮೇ 12: ಉಡುಪಿಯ ಪಲಿಮಾರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕವಾಗಿದ್ದಾರೆ. ಅಷ್ಠಮಠಗಳಲ್ಲಿ ಒಂದಾದ ಪಲಿಮಾರು ಮಠದ 31ನೇ ಯತಿಗಳ ಪಟ್ಟಾಭಿಷೇಕ ಮಹೋತ್ಸವ ಭಾನುವಾರ ಶ್ರೀಕೃಷ್ಣ ಮಠದಲ್ಲಿ ನೆರವೇರಿತು. ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳು ಮಠದ ಮುಂದಿನ ಉತ್ತರಾಧಿಕಾರಿಯನ್ನಾಗಿ ವಿದ್ಯಾ ರಾಜೇಶ್ವರ ತೀರ್ಥರನ್ನು ನೇಮಿಸಿ ಪಟ್ಟಾಭಿಷೇಕ ಮಾಡಿದರು.

ಉಡುಪಿಯ ಅಷ್ಟಮಠಗಳಲ್ಲಿ ಪಲಿಮಾರು ಮಠವೂ ಒಂದು. ಕಳೆದ ಎಂಟ್ನೂರು ವರ್ಷಗಳಲ್ಲಿ 30 ಯತಿಗಳು ಇಲ್ಲಿಗೆ ಮಠಾಧೀಶರಾಗಿದ್ದಾರೆ. ಸದ್ಯ ಕೃಷ್ಣಪೂಜೆಯನ್ನು ನಡೆಸುತ್ತಿರುವ ಪಲಿಮಾರು ವಿದ್ಯಾದೀಶ ತೀರ್ಥರು ಈ ಪರಂಪರೆಯ ಮೂವತ್ತನೆಯ ಯತಿ. ಇದೀಗ ಅವರು ಶಿಷ್ಯ ಸ್ವೀಕಾರ ಮಾಡಿದ್ದು 31 ನೇ ಯತಿಯ ಪಟ್ಟಾಭಿಷೇಕ ಇಂದು ನಡೆಯಿತು.

ಈ ಸಂದರ್ಭ ಅಷ್ಠಮಠಗಳ ಯತಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ 12.20ಕ್ಕೆ ಸರ್ವಜ್ಞ ಪೀಠದಲ್ಲಿ ಕುಳಿತ ಪರ್ಯಾಯ ಶ್ರೀಗಳು ಉತ್ತರಾಧಿಕಾರಿಯ ಹೆಸರನ್ನು ನಾಮಕರಣ ಮಾಡಿ ಘೋಷಿಸುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.

ಕಳೆದ ನಾಲ್ಕು ದಿನಗಳಿಂದಲೂ ವಿವಿಧ ಧಾರ್ಮಿಕ ಕಾಯಕ್ರಮಗಳು ಏರ್ಪಾಟಾಗಿತ್ತು. ಇಂದು ನವಯತಿಯ ರಾಜಗಾಂಭೀರ್ಯದ ಪಟ್ಟಾಭಿಷೇಕ ಜರುಗಿತು. ಕೃಷ್ಣ ದೇವರಿಗೆ ಮಹಾಪೂಜೆಯ ನಂತರ ಸನ್ನಿಧಾನದಲ್ಲಿ ಚತುರ್ವೇದ, ಭಾಗವತ, ಭಗವದ್ಘಿತೆ, ರಾಮಾಯಣ ಮೊದಲಾದ ಗ್ರಂಥಗಳ ಪಾರಾಯಣ ನಡೆಯಿತು.

ಮಹಿಳೆಯರು ಲಕ್ಷ್ಮೀ ಶೋಭಾನೆ ಪಠಿಸಿದರು. ಇದೇ ವೇಳೆಯಲ್ಲಿ ಪಲಿಮಾರು ಮಠದ ಹಿರಿಯ ಸ್ವಾಮೀಜಿ ವಿದ್ಯಾಧೀಶ ತೀರ್ಥರು, ಕೃಷ್ಣ-ವೇದವ್ಯಾಸರ ವಿಗ್ರಹ ಹಾಗೂ ವಿಶ್ವಂಭರ ಸಾಲಿಗ್ರಾಮವನ್ನು ನೂತನ ಶಿಷ್ಯನ ತಲೆಯ ಮೇಲಿಟ್ಟು ಅಭಿಷೇಕ ಮಾಡಿದರು. ಭಕ್ತರ ಜಯಘೋಷದ ನಡುವೆ, ಪಲಿಮಾರು ಮಠದ ಉತ್ತರಾಧಿಕಾರಿಗೆ ‘ವಿದ್ಯಾ ರಾಜೇಶ್ವರ ತೀರ್ಥ’ ಎಂಬ ನಾಮಕರಣ ಮಾಡಲಾಯ್ತು.
ಬಳಿಕ ಪಲಿಮಾರು ಮಠದ ಹಿರಿಯ ಯತಿಗಳು, ಕಿರಿಯ ಯತಿಗಳನ್ನು ಶ್ರೀಕೃಷ್ಣನ ಗರ್ಭಗುಡಿಗೆ ಕರೆದೊಯ್ದು ಮಂಗಳಾರತಿ ಮಾಡಿಸಿ ಪ್ರಥಮ ಪೂಜೆ ನೇರವೇರಿಸಿದರು. ಈ ಮೂಲಕ ಅಧಿಕೃತವಾಗಿ ಕೃಷ್ಣ ಪೂಜೆಯ ಅಧಿಕಾರವನ್ನು ನೀಡಲಾಯಿತು.