ಮಂಗಳೂರಿನ ಕೆಪಿಟಿ ಬಳಿ ಮಹಿಳೆಯೊಬ್ಬರ ಭೀಕರ ಹತ್ಯೆ

ಮಂಗಳೂರು ಮೇ 12: ಮಂಗಳೂರಿನ ಕದ್ರಿ ಪಾರ್ಕ್ ಬಳಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ರುಂಡ ದೇಹ ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಮಹಿಳೆಯ ಭೀಕರ ಹತ್ಯೆ ಮಾಡಲಾಗಿದೆ ಎಂದು ಸಂಶಯಿಸಲಾಗಿದೆ.

ದುಷ್ಕರ್ಮಿಗಳು ಮಹಿಳೆಯನ್ನು ಭೀಕರ ಹತ್ಯೆ ಮಾಡಿ ರುಂಡ ಹಾಗೂ ದೇಹವನ್ನು ಪ್ರತ್ಯೇಕ ಸ್ಥಳಗಳಲ್ಲಿ ಎಸೆದು ಹೋಗಿದ್ದಾರೆ ಎಂದು ಹೇಳಲಾಗಿದೆ. ಮಹಿಳೆಯ ರುಂಡ ಹೆಲ್ಮೆಟ್ ನಲ್ಲಿ ಮಂಗಳೂರಿನ ಕದ್ರಿ ಪಾರ್ಕ್ ಬಳಿ ಪತ್ತೆಯಾಗಿದ್ದು, ತುಂಡರಿಸಿದ ದೇಹ ಗೋಣಿ ಚೀಲದಲ್ಲಿ ಮಂಗಳೂರಿನ ಮೋರ್ಗನ್ ಗೇಟ್ ಬಳಿ ಪತ್ತೆಯಾಗಿದೆ.

ಮೃತ ದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿದ ಕೆಲ ದಿನಗಳಾಗಿರುವ ಶಂಕೆ ವ್ಯಕ್ತವಾಗಿದೆ. ಪಾಂಡೇಶ್ವರ ಮತ್ತು ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ರುಂಡ- ಮುಂಡ ಭೇದಿತ ಮಹಿಳೆಯ ಶವದ ಗುರುತು ಪತ್ತೆಯಾಗಿದ್ದು, ಮೃತ ಮಹಿಳೆಯನ್ನು ಮಂಗಳೂರಿನ ಮಂಕಿಸ್ಟಾಂಡ್ ನಿವಾಸಿ ಶ್ರೀಮತಿ ಶೆಟ್ಟಿ(40) ಎಂದು ಗುರುತಿಸಲಾಗಿದೆ. ಈಕೆ ಗಂಡನಿಂದ ಡೈವರ್ಸ್ ಪಡೆದು ಅತ್ತೆಯ ಜೊತೆ ವಾಸವಿದ್ದರು ಎಂದು ಹೇಳಲಾಗಿದೆ.

ಮೃತ ಮಹಿಳೆಯ ಮಾಜಿ ಗಂಡ ಕಳ್ಳತನ ಪ್ರಕರಣ ಒಂದರಲ್ಲಿ ಮಂಗಳೂರಿನ ಜೈಲು ಸೇರಿದ್ದ. ವೈಯಕ್ತಿಕ ದ್ವೇಷದಿಂದ ಕೊಲೆಗೈದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದು, ಕೊಲೆಯ ತನಿಖೆಗೆ ಮೂರು ಪೊಲೀಸರ ತಂಡ ರಚನೆ ಮಾಡಲಾಗಿದೆ ಎಂದು ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.