Connect with us

DAKSHINA KANNADA

ಮಂಗಳೂರು : ಮೋದಿ ಪರಿವಾರದಲ್ಲಿ ವಿಲೀನಗೊಂಡ ಪುತ್ತಿಲ ಪರಿವಾರ, ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಅರುಣ್ ಪುತ್ತಿಲ ಆ್ಯಂಡ್ ಟೀಂ..!

ಮಂಗಳೂರು ಮಾರ್ಚ್ 16: ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿಯಲ್ಲಿ ನಡೆಯುತ್ತಿದ್ದ ಗೊಂದಲಗಳಿಗೆ ಇಂದು ತೆರೆ ಬಿದ್ದಿದ್ದು, ಕೊನೆಗೂ ಪುತ್ತಿಲ ಪರಿವಾರ ಬಿಜೆಪಿಯೊಂದಿಗೆ ವಿಲೀನಗೊಂಡಿದೆ. ಹಿಂದೂ ಪರ ಹೋರಾಟಗಾರ, ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ದಕ್ಷಿಣಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.

ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಪ್ರಮುಖರೊಂದಿಗೆ ಬೇಷರತ್ತಾಗಿ ಬಿಜೆಪಿ ಸೇರಿಕೊಂಡರು. ಈ ಮೂಲಕ ಕಳೆದ ಕೆಲ ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ಅಂಕದ ಪರದೆ ಬಿದ್ದಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿ, ಬಿಜೆಪಿಗೆ ಪುತ್ತಿಲ ಪರಿವಾರ ದೊಡ್ಡ ಸವಾಲು ಎಸೆದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪುತ್ತಿಲ,  ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ದೂಡುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ಪುತ್ತಿಲ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಿದ್ದರು. ಆದ್ರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾದ ಕಾಲಘಟದಲ್ಲಿ ಪುತ್ತಿಲ ಪರಿವಾರ ಅರುಣ್ ಕುಮಾರ್ ಪುತ್ತಿಲದ ಜೊತೆ ಬಿಜೆಪಿ ಸೇರಲು ನಿರ್ಧರಿಸಿತ್ತು.

ಈ ಮಧ್ಯೆ ಕೆಲ ಗೊಂದಲಗಳು ಏರ್ಪಟ್ಟವು. ಕೆಲವು ದಿನಗಳ ಹಿಂದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಅರುಣ್ ಪುತ್ತಿಲ ಭೇಟಿಯಾಗಿದ್ದರು. ಯಾವುದೇ ಬೇಡಿಕೆಯನ್ನು ಇಡದೇ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ವಿಜಯೇಂದ್ರ ಸೂಚಿಸಿದ್ದರು. ಇದಕ್ಕೆ ಪುತ್ತಿಲ ಪರಿವಾರ ಸಮ್ಮತಿ ಸೂಚಿಸಿತ್ತು. ಇದೀಗ ಎಲ್ಲವೂ ಸುಖಾಂತ್ಯಗೊಂಡಿದ್ದು ಪುತ್ತಿಲ ಪರಿವಾರವು ಮೋದಿ ಪರಿವಾರದ ಜೊತೆ ವಿಲೀನಗೊಂಡಿದೆ. ಇದರೊಂದಿಗೆ ಕಳೆದ ವಿಧಾನಸಭಾ ಚುನಾವಣೆಯಿಂದ ಆರಂಭಗೊಂಡಿದ್ದ ಬಿಜೆಪಿ – ಪುತ್ತಿಲ ಪರಿವಾರದ ನಡುವಿನ ಸಂಘರ್ಷ ತಾರ್ಕಿಕ ಅಂತ್ಯಕಂಡಿದೆ. ಪುತ್ತಿಲ ಪರಿವಾರವು ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿಗೆ ದಕ್ಷಿಣ ಕನ್ನಡದಲ್ಲಿ ಆನೆಬಲ ಬಂದಂತಾಗಿದೆ. ಪುತ್ತಿಲರನ್ನು ದಕ್ಷಿಣ ಕನ್ನಡ ಮಾತ್ರವಲ್ಲದೇ, ಉಡುಪಿ ಲೋಕಸಭಾ ವ್ಯಾಪ್ತಿಯಲ್ಲೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *