Connect with us

  DAKSHINA KANNADA

  ಬರ ಪರಿಹಾರ ರಾಜ್ಯಕ್ಕೆ ಬಿಡುಗಡೆ ಮಾಡಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಅರ್ಪಿಸಬೇಕು ಹೊರತು ಕೇಂದ್ರಕ್ಕೆ ಅಲ್ಲ : ಹರೀಶ್ ಕುಮಾರ್

  ಮಂಗಳೂರು :  ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಚಾಟಿ ಬೀಸಿದ ಪರಿಣಾಮವಾಗಿ ರಾಜ್ಯಕ್ಕೆ ಬರ ಪರಿಹಾರ ಧನ ಬಿಡುಗಡೆಯಾಗಿರುವುದರಿಂದ ಧನ್ಯವಾದ ಸಲ್ಲಬೇಕಿರುವುದು ಸುಪ್ರೀಂ ಕೋರ್ಟಿಗೆ ಹೊರತು ಕೇಂದ್ರಕ್ಕೆ ಅಲ್ಲ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.


  ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಬರಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯದ ಜನರೆದುರು ಹೇಳಿಕೆ ನೀಡಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಮುಖಂಡರಾದ ಅಶೋಕ್ ಅವರು ದಾಖಲೆ ಒದಗಿಸಲಿ ಎಂದು ಸವಾಲು ಹಾಕಿದರು.ತೀವ್ರ ಬರದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರದಿಂದ ಕೊನೆಗೂ 3454 ಕೋಟಿ ರೂ. ಬಿಡುಗಡೆ ಮಾಡುವ ಮೂಲಕ ಸಣ್ಣ ಪ್ರಮಾಣದ ಬರಪರಿಹಾರ ಬಿಡುಗಡೆಗೊಳಿಸಿದೆ.

  ಬರದಿಂದಾಗಿ ರಾಜ್ಯದಲಿಲ 48 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅಂದಾಜು 35,000 ಕೋಟಿ ರೂ. ನಷ್ಟವಾಗಿದೆ. ಕೇಂದ್ರದಿಂದ ಬರಪರಿಹಾರವಾಗಿ 18171 ಕೋಟಿ ರೂ.ಗಳಿಗೆ ಮನವಿ ಸಲ್ಲಿಸಲಾಗಿತ್ತು. ರಾಜ್ಯದ ಹಿರಿಯ ಸಚಿವರು ಮಾತ್ರವಲ್ಲದೆ ಖುದ್ದು ಮುಖ್ಯಮಂತ್ರಿಯವರು ಪ್ರಧಾನ ಮಂತ್ರಿಯನ್ನೂ ಭೇಟಿ ಮಾಡಿ ಪರಿಹಾರದ ಬೇಡಿಕೆ ಸಲ್ಲಿಸಿದ್ದರು. ಮುಖ್ಯಮಂತ್ರಿ ನೇತೃತ್ವದಲ್ಲಿ ರಾಜ್ಯದ ಎಲ್ಲ ಶಾಸಕರು ದೆಹಲಿಯಲ್ಲಿ ಪ್ರತಿಭಟಿಸಿದರೂ ಸ್ಪಂದನೆ ನೀಡಿರಲಿಲ್ಲ. ಈ ನಡುವೆ ಹಣಕಾಸು ಸಚಿವರು ಕೇಂದ್ರದಿಂದ ಬರ ಪರಿಹಾರ ನೀಡಿದ್ದಾಗೆ ಹೇಳಿಕೆ ನೀಡಿದ್ದರು. ವಿಪಕ್ಷ ನಾಯಕರಾದ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಬರ ಪರಿಹಾರ ಒದಗಿಸಲಾಗಿದೆ ಎಂದೇ ವಾದಿಸಿದ್ದರು.

  ಕೊನೆಗೂ ಮುಖ್ಯಮಂತ್ರಿ ದಾರಿ ಕಾಣದೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಿದ್ದರು. ಸುಪ್ರೀಂ ಕೋರ್ಟ್ನ ಛೀಮಾರಿ ಹಾಗೂ ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ 14ರಲ್ಲಿ 11 ಸ್ಥಾನ ಕಾಂಗ್ರೆಸ್ ಪಾಲಾಗಿರುವುದು ಮನಗಂಡು ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿದೆ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋದ ನಿದರ್ಶನ ಇದು ಪ್ರಥಮವಾಗಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಕೇಂದ್ರ ಸರಕಾರ ಮಾಡುವ ತಾರತಮ್ಯ ನೀತಿಗೆ ಇದು ಎಚ್ಚರಿಕೆಯ ಸಂದೇಶ ಎಂದು ಹರೀಶ್ ಕುಮಾರ್ ಹೇಳಿದರು.

  ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸುವ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಗೋಹತ್ಯೆ ಖಚಿತ, ಎಸ್‌ಸಿ/ಒಬಿಸಿ ಮೀಸಲಾತಿ ಬದಲಾವಣೆ, ಕಾಶ್ಮೀರದಲ್ಲಿ 370ನೆ ವಿಧಿ ವಾಪಾಸು ಪಡೆಯಲಾಗುವುದು, ಮಂಗಳಸೂತ್ರಕ್ಕೆ ರಕ್ಷಣೆ ಇಲ್ಲ ಎಂಬೆಲ್ಲಾ ಭಾವನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಆ ರೀತಿ ಎಲ್ಲಿ ಹೇಳಲಾಗಿದೆ ಎಂಬುದಕ್ಕೆ ಪ್ರಧಾನಿಯವರು ಆಧಾರ ಒದಗಿಸಲಿ. ಭ್ರಷ್ಟಾಚಾರ ತೊಲಗಿಸುವುದಾಗಿ ಹೇಳುವ ಪ್ರಧಾನಿ ಮೋದಿಯವರು ತಮ್ಮ ಪಕ್ಷಕ್ಕೆ ಅಂತಹವರನ್ನೆಲ್ಲಾ ಸೇರಿಸಿಕೊಂಡಿದ್ದಾರೆ. ಕೇಂದ್ರದಲ್ಲಿ 10 ವರ್ಷಗಳ ದುರಾಡಳಿತವನ್ನು ಜನ ಸಹಿಸಿದ್ದಾರೆ. ಸುಳ್ಳಿನ ಸರಮಾಲೆಯನ್ನು ಅರಿತುಕೊಂಡಿದ್ದಾರೆ ಎಂದರು.

  ದ.ಕ. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮುಖಂಡರು ಒಗ್ಗಟ್ಟಿನ ಪ್ರದರ್ಶನ ನೀಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಮಾಡಿದ್ದು, ಪಕ್ಷಕ್ಕೆ ಹೆಚ್ಚು ಮತಗಳನ್ನು ಕೊಡಿಸುವಲ್ಲಿ ಶ್ರಮಿಸಿದ್ದಾರೆ. 33 ವರ್ಷಗಳಿಂದ ಜಿಲ್ಲೆಯಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ನ ಒಗ್ಗಟ್ಟಿನ ಹೋರಾಟಕ್ಕೆ ಉತ್ತಮ ಫಲ ದೊರಕಲಿದೆ. ಉತ್ತಮ ರೀತಿಯಲ್ಲಿ ಚುನಾವಣೆ ಎದುರಿಸಿದ ಸಂತೃಪ್ತಿ ಇದೆ. ಪಕ್ಷದ ಅಭ್ಯರ್ಥಿ ಸುಮಾರು 1 ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹರೀಶ್ ಕುಮಾರ್ ಹೇಳಿದರು.

  ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಸದಾಶಿವ ಉಳ್ಳಾಲ್, ಜಿ.ಎ. ಬಾವ, ಶಶಿಧರ ಹೆಗ್ಡೆ, ಪ್ರತಿಭಾ ಕುಳಾಯಿ, ಅಶ್ವಿನ್ ಕುಮಾರ್ ರೈ, ಮಹಾಬಲ ಮಾರ್ಲ, ಸ್ಟಾನಿ ಅಲ್ವಾರಿಸ್, ಟಿ.ಕೆ. ಸುಧೀರ್, ಗಣೇಶ್ ಪೂಜಾರಿ, ಅಶ್ರಫ್, ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply