LATEST NEWS
ನ್ಯಾಯಬೆಲೆ ಅಂಗಡಿಗಳಲ್ಲಿ ಪಾಯಿಂಟ್ ಆಫ್ ಸೇಲ್ ಆಳವಡಿಕೆ ಕಡ್ಡಾಯ – ಖಾದರ್

ಮಂಗಳೂರು ಸೆಪ್ಟೆಂಬರ್ 12: ಪಡಿತರ ಸಾಮಗ್ರಿಗಳನ್ನು ಪೂರೈಸುವ ನ್ಯಾಯಬೆಲೆ ಅಂಗಡಿಗಳಲ್ಲಿ ಅನುಕೂಲವಾಗಲು ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಇಂಟರ್ ನೆಟ್ ಸೌಲಭ್ಯ ಇದ್ದು ಪಿಒಎಸ್‍ಗಳನ್ನು ಅಳವಡಿಸದೇ ಇರುವ ಕಡೆ ಆಹಾರ ಇಲಾಖೆಯಿಂದಲೇ ನೇರವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಆಹಾರ ಇಲಾಖೆಯಿಂದಲೇ ಪಿಒಎಸ್‍ಗಳನ್ನು ಅಳವಡಿಸಿದರೆ, ಮುಂದಿನ ಹಂತಗಳಲ್ಲಿ ಪಡಿತರ ಅಂಗಡಿಗಳಿಂದ ಅಳವಡಿಕೆಯ ಶುಲ್ಕವನ್ನು ವಸೂಲಿ ಮಾಡಲಾಗುವುದು. ಇಲಾಖೆಯು ಖಾಸಗಿ ಸಂಸ್ಥೆಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಅದರ ಮುಖಾಂತರ ಪಿಒಎಸ್‍ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು. ಇಂಟರ್ ನೆಟ್ ಸೌಲಭ್ಯ ಇಲ್ಲದ ಕಡೆಗಳಿಗೆ ವಿನಾಯ್ತಿ ನೀಡಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಶೇ.60ರಷ್ಟು ಪಡಿತರ ಅಂಗಡಿಗಳಲ್ಲಿ ಪಿಒಎಸ್‍ಗಳನ್ನು ಅಳವಡಿಸಲಾಗಿದೆ. ಬಳ್ಳಾರಿಯಲ್ಲಿ ಶೇ.80 ಅನುಷ್ಠಾನವಾಗಿದೆ. ನನ್ನ ಮಂಗಳೂರು ಕ್ಷೇತ್ರದಲ್ಲಿ ಶೇ.90 ಅನುಷ್ಠಾನಿಸಲಾಗಿದೆ. ರಾಜ್ಯದಲ್ಲಿ ಒಟ್ಟು 24 ಸಾವಿರ ಪಡಿತರ ಅಂಗಡಿಗಳು ಇವೆ ಎಂದು ಅವರು ತಿಳಿಸಿದರು.
ವಾರ್ತಾಭಾರತಿ ವರದಿಗಾರನ ಬಂಧನ ಉನ್ನತ ಮಟ್ಟದ ತನಿಖೆ – ಸಚಿವ ಖಾದರ್
ವಾರ್ತಾ ಭಾರತಿ ಪತ್ರಿಕೆಯ ಬಂಟ್ವಾಳ ವರದಿಗಾರನ ವಿರುದ್ಧ ಪ್ರಕರಣವೊಂದರ ವರದಿಗೆ ಸಂಬಂಧಿಸಿ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದಾರೆ. ಈ ವಿಚಾರದಲ್ಲಿ ಪೊಲೀಸರು ಹಾಗೂ ಮಾಧ್ಯಮದ ನಡುವೆ ಪರಸ್ಪರ ಆರೋಪ ಇರುವುದರಿಂದ ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಡೆಸುವಂತೆ ಗೃಹ ಸಚಿವರನ್ನು ಕೋರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.