Connect with us

    DAKSHINA KANNADA

    ಮುಡಾದ ಲಂಚಾವತಾರ,ಭ್ರಷ್ಟಾಚಾರದಿಂದ ಮಂಗಳೂರಿನ ಭೂದಂಧೆಯ ಕರಾಳ ಮುಖ ಬಯಲು ; ಮುನೀರ್ ಕಾಟಿಪಳ್ಳ..!

    ಮಂಗಳೂರು :  ಮೂಡಾ ಆಯುಕ್ತ ಮನ್ಸೂರ್ ಅಲಿ ಯವರನ್ನು ಭೂ ಖರೀದಿ, TDR ಫೈಲ್ ಕ್ಲಿಯರೆನ್ಸ್ ಗಾಗಿ ಲಂಚದ ಹಣದ ಬೇಡಿಕೆಯ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿರುವುದು ಮಂಗಳೂರಿನಲ್ಲಿ ಭೂದಂಧೆಯ ಆಗಾಧತೆ ಹಾಗೂ ಕರಾಳ ಮುಖವನ್ನು ಬಯಲುಗೊಳಿಸಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

    ಪಚ್ಚನಾಡಿ ಡಂಪಿಂಗ್ ಯಾರ್ಡ್ ಪಕ್ಕದಲ್ಲಿ ಯಾವುದೇ ಬೇಡಿಕೆಯಿಲ್ಲದ 10 ಎಕರೆಗೂ ಹೆಚ್ಚು ನಿರುಪಯೋಗಿ ಜಮೀನನ್ನು ಇತ್ತೀಚೆಗೆ ತೀರಾ ಅಗ್ಗದ ದರಕ್ಕೆ ರಿಯಲ್ ಎಸ್ಟೇಲ್ ಲಾಭಿಯೊಂದು ಖರೀದಿಸಿದ್ದು, ಖರೀದಿ ಮಾಡಿದ ಬೆನ್ನಿಗೆ ಅದನ್ನು ಸೆಂಟ್ಸ್ ಗೆ ಲಕ್ಷಾಂತರ ಮೌಲ್ಯ ಬೆಲೆಬಾಳುವ ಟಿ. ಡಿ. ಆರ್ ನಿಯಮದಡಿ ಮಂಗಳೂರು ಮಹಾನಗರ ಪಾಲಿಕೆ ಖರೀದಿ ಮಾಡಲು ಮುಂದಾಗಿರುವುದು ಆ ಸಂದರ್ಭದಲ್ಲೆ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಗುಸು ಗುಸು ಸುಧ್ದಿಗೂ ಗ್ರಾಸವಾಗಿತ್ತು.

    ಇದೀಗ ಅದೇ ಜಮೀನಿನ ಟಿ. ಡಿ ಆರ್ ನೀಡಲು 25 ಲಕ್ಷ ರೂಪಾಯಿಯಷ್ಟು ದೊಡ್ಡ ಮೊತ್ತದ ಲಂಚ ಕೇಳಿದ ಆರೋಪದ ಮೇಲೆ ಮೂಡಾ ಕಮೀಷನರ್ ಬಂಧನ ನಡೆದಿದೆ. ಲಂಚ ಪ್ರಕರಣದ ಕುರಿತು ಸರಿಯಾದ ತನಿಖೆ ನಡೆದು ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆ ಆಗಬೇಕು. ಅದರ ಜೊತೆಗೆ ಈ ಬಂಧನ, ಹತ್ತು ಎಕರೆ ನಿರುಪಯೋಗಿ ಜಮೀನಿಗೆ ಹತ್ತಾರು ಕೋಟಿ ರೂಪಾಯಿ ಮೌಲ್ಯದ ಟಿ. ಡಿ. ಆರ್ ನೀಡಲು ನಗರ ಪಾಲಿಕೆ ಮುಂದಾಗಿರುವದರ ಕುರಿತೂ ತನಿಖೆ ನಡೆಯಬೇಕಿದೆ. ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ, ನಗರದಲ್ಲಿ ಬಿಜೆಪಿ ಶಾಸಕರು ಅಧಿಕಾರ ಹಿಡಿದ ನಂತರ ಟಿ ಡಿ ಆರ್ ನೀಡುವ ಮೂಲಕ ಜಮೀನು ಖರೀದಿ ಎಂಬದು ದಂಧೆಯ ಸ್ವರೂಪ ಪಡೆದಿದೆ ಎಂಬುದನ್ನೂ ಗಮನಿಸಬೇಕಿದೆ.

    ಈಗ ಟಿ ಡಿ ಆರ್ ನೀಡಿಕೆಯ ಫೈಲ್ ಕ್ಲಿಯರೆನ್ಸ್ ಗಾಗಿ ಲಂಚದ ಬೇಡಿಕೆ, ಮೂಡಾ ಕಮೀಷನರ್ ಬಂಧನದ ಮೂಲಕ ಪಚ್ಚನಾಡಿಯ 10. 8 ಎಕರೆ ನಿರುಪಯೋಗಿ ಜಮೀನು ಖರೀದಿ, ಕೋಟ್ಯಾಂತರ ಮೊತ್ತ ಬೆಲೆಬಾಳುವ ಟಿ.ಡಿ.ಆರ್ ನೀಡಿಕೆ ಸಾರ್ವಜನಿಕರ ಗಮನಕ್ಕೆ ಬಂದಿದೆ. ಸಾಮಾನ್ಯ ನಾಗರಿಕರಿಗೆ ಅಪರಿಚಿತವಾಗಿರುವ ಟಿ.ಡಿ. ಆರ್ ನೀಡಿಕೆಯ ಕುರಿತೇ ನಗರ ಪಾಲಿಕೆ ಶ್ವೇತಪತ್ರ ಹೊರಡಿಸಬೇಕು ಎಂದು ನಾವು ನಾಗರಿಕರ ಪರವಾಗಿ ಆಗ್ರಹಿಸುತ್ತೇವೆ.

    ಈಗ ಸುದ್ದಿಗೆ ಗ್ರಾಸವಾಗಿರುವ ಪಚ್ಚನಾಡಿಯ 10.8 ಎಕರೆ ನಿರುಪಯೋಗಿ ಜಮೀನನ್ನು ಪಿರ್ಯಾದಿದಾರರು ಖರೀದಿ ಮಾಡಿದ್ದು ಯಾವಾಗ, ಖರೀದಿ ಮಾಡಿದಾಗ ಪಾವತಿಸಿದ ಮೌಲ್ಯ ಎಷ್ಟು ? ಈಗ ನಗರ ಪಾಲಿಕೆ ಆ ಜಮೀನಿಗೆ ನೀಡಲು ಒಪ್ಪಿರುವ ಟಿ.ಡಿ.ಅರ್ ಮೌಲ್ಯ ಎಷ್ಟು ಎಂಬುದು ಬಹಿರಂಗಗೊಳ್ಳಬೇಕು. ಪಿರ್ಯಾದಿದಾರ ಮೂಲ ಮಾಲಕನಿಂದ ಈ ಜಮೀನು ಖರೀದಿಸುವ ಪೂರ್ವದಲ್ಲೆ ಲಾಭಿಯೊಂದರ ಮೂಲಕ ನಗರ ಪಾಲಿಕೆ ಟಿ.ಡಿ. ಆರ್ ಅಡಿ ಈ ಜಮೀನು ಖರೀದಿಸುವ ಕುರಿತು ಡೀಲ್ ನಡೆದಿರುವ ಕುರಿತೂ ಆರೋಪಗಳಿದ್ದು, ಫಿರ್ಯಾದಿದಾರ ಖರೀದಿ ಮಾಡಿಸ ಬೆನ್ನಿಗೇ ನಗರ ಪಾಲಿಕೆ ಫಿರ್ಯಾದಿದಾರನಿಂದ ಅದೇ ಜಮೀನು ಟಿ.ಡಿ.ಆರ್ ಅಡಿ ಖರೀದಿಸಲು ಮುಂದಾಗಿದ್ದು ಅನುಮಾನವನ್ನು ಹೆಚ್ಚಿಸಿದೆ. ಈ ಎಲ್ಲಾ ವಿಚಾರಗಳೂ ತನಿಖೆಗೆ ಒಳಪಡುವ ಅಗತ್ಯ ಇದೆ.

    ರಿಯಲ್ ಎಸ್ಟೇಟ್ ಲಾಭಿಯ ಭಾಗ ಆಗಿರುವ ಪಿರ್ಯಾದಿದಾರ ರಾಜಕೀಯವಾಗಿಯೂ ಪ್ರಭಾವಿ ಎನ್ನಲಾಗಿದ್ದು, ಇಂತಹ ಹಲವು ಟಿ.ಡಿ.ಆರ್ ಖರೀದಿ ಪ್ರಕರಣಗಳಲ್ಲಿ ಒಳಗೊಂಡಿದ್ದಾರೆ ಎಂಬ ಆರೋಪಗಳು ನಗರಪಾಲಿಕೆಯ ಒಳಗಡೆಯಿಂದಲೇ ಕೇಳಿ ಬರುತ್ತಿದೆ. ಪಿರ್ಯಾದಿದಾರರು ರಾಜಕೀಯ, ಆರ್ಥಿಕವಾಗಿ ಬಲಾಢ್ಯವಾಗಿರುವ ನಗರದ ಪ್ರಬಲ ಲಾಬಿಯೊಂದರ ಭಾಗ ಎಂಬ ಆರೋಪವೂ ಇದ್ದು, ಇತ್ತೀಚೆಗೆ ವಿವಾದಕ್ಕೀಡಾದ ನಗರದ ಸ್ಟ್ರೀಟ್ ಫುಡ್ ಫೆಸ್ಟಿವಲ್ ನ ರೂವಾರಿಗಳಲ್ಲಿ ಒಬ್ಬರು ಎಂಬುದು ಗುಟ್ಟಿನ ವಿಚಾರ ಏನಲ್ಲ, ನಗರದ ಶಾಸಕರೂ ಈ ಫಿರ್ಯಾದಿದಾರರ ಆಪ್ತರು ಎನ್ನುವುದು ಪ್ರಕರಣದ ನಿಗೂಢತೆಯನ್ನು ಹೆಚ್ಚಿಸಿದೆ. ಈ ಎಲ್ಲಾ ಗಂಭೀರ ಅಂಶಗಳ ಹಿನ್ನಲೆಯಲ್ಲಿ ಮೂಡಾ ಕಮೀಷನರ್ 25 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿರುವ ಪ್ರಕರಣದ ಜೊತೆಗೆ ಈ ಪ್ರಕರಣದ ಮೂಲ ಆಗಿರುವ 10.8 ಎಕರೆ ಜಮೀನನ್ನು ಟಿ. ಡಿ. ಆರ್ ಅಡಿ ನಗರ ಪಾಲಿಕೆ ಖರೀದಿಸುವ ಒಪ್ಪಂದವನ್ನು ರಾಜ್ಯ ಸರಕಾರ ಅಮಾನತಿನಲ್ಲಿ ಇಡಬೇಕು. ಜೊತೆ ಈ 10. 8 ಎಕರೆ ನಿರುಪಯೋಗಿ ಜಮೀನನ್ನು ಪಿರ್ಯಾದಿಧಾರ ಖರೀದಿ ಮಾಡಿದ ಮೂಲದಿಂದಲೆ ಸಮಗ್ರ ತನಿಖೆಗೆ ಒಳಪಡಿಸಬೇಕು, ಮಂಗಳೂರು ಪಾಲಿಕೆಯಲ್ಲಿ ನಡೆಯುತ್ತಿರುವ ಟಿ.ಡಿ.ಆರ್ ಹೆಸರಿನಲ್ಲಿ ನಡೆಯುವ ಭೂದಂಧೆ, ಸಾರ್ವಜನಿಕ ಸಂಪತ್ತಿನ ಲೂಟಿ, ದುರುಪಯೋಗಕ್ಕೂ ಕಡಿವಾಣ ಹಾಕಬೇಕು. ನಗರ ಪಾಲಿಕೆಯಲ್ಲಿ ನಡೆದಿರುವ ಟಿ‌.ಡಿ.ಆರ್ ನೀಡಿಕೆಯ ಎಲ್ಲಾ ಪ್ರಕರಣವನ್ನು ಪರಿಶೀಲಿಸಿ ಅವ್ಯವಹಾರಗಳು ನಡೆದಿದ್ದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಮುನೀರ್ ಕಾಟಿಪಳ್ಳ ಹೆಳಿಕೆಯಲ್ಲಿ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply