Connect with us

  DAKSHINA KANNADA

  ಗಾಂಜಾ ಮಾರಾಟ, ಸೇವನೆ: 2 ವೈದ್ಯರು, 7 ವೈದ್ಯ ವಿದ್ಯಾರ್ಥಿಗಳು ಸೇರಿ 10 ಮಂದಿ ಬಂಧನ

  ಮಂಗಳೂರು, ಜನವರಿ 11: ನಿಷೇಧಿತ ಮಾದಕ ಪದಾರ್ಥ ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣ ಸಂಬಂಧ ನಗರದ ಪೊಲೀಸರು ನಗರ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಇಬ್ಬರು ವೈದ್ಯರು, ಏಳು ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ.

  ಅನಿವಾಸಿ ಭಾರತೀಯ, ಇಂಗ್ಲೆಂಡ್‌ನ ಪ್ರಜೆ ನೀಲ್‌ಕಿಶೋರ್‌ ರಾಮ್‌ಜಿ ಷಾ (38), ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧಿಕಾರಿಯಾಗಿರುವ ಕೇರಳದ ಡಾ.ಸಮೀರ್‌ (32), ವೈದ್ಯಕೀಯ ಶಸ್ತ್ರಚಿಕಿತ್ಸಕ, ತಮಿಳುನಾಡಿನ ಡಾ.ಮಣಿಮಾರನ್‌ (28) ಮುತ್ತು (ತಮಿಳುನಾಡು), ವೈದ್ಯ ವಿದ್ಯಾರ್ಥಿನಿಯರಾದ ಕೇರಳದ ನದಿಯಾ ಸಿರಾಜ್‌ (24), ಮಹಾರಾಷ್ಟ್ರದ ಪುಣೆಯ ಇರಾ ಬಾಸಿನ್‌ (23), ಪಂಜಾಬಿನ ಚಂಡೀಗಡದ ರಿಯಾ ಚಡ್ಡಾ (22), ಆಂಧ್ರಪ್ರದೇಶದ ವರ್ಷಿಣಿ ಪ್ರಾಥಿ (26), ವೈದ್ಯ ವಿದ್ಯಾರ್ಥಿಗಳಾದ ಚಂಡೀಗಡದ ಭಾನು ದಹಿಯಾ (27), ದೆಹಲಿಯ ಕ್ಷಿತಿಜ್‌ ಗುಪ್ತ (25) ಹಾಗೂ ಬಂಟ್ವಾಳ ತಾಲ್ಲೂಕಿನ ಮಾರಿಪಳ್ಳದ ಮಹಮ್ಮದ್‌ ರವೂಫ್‌ ಅಲಿಯಾಸ್‌  ಗೌಸ್‌ (34) ಬಂಧಿತರು.

  ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌, ‘ನಗರದ ಬಂಟ್ಸ್ ಹಾಸ್ಟೆಲ್‌ ರಸ್ತೆ ಬಳಿಯ ಅಪಾರ್ಟ್ಮೆಂಟ್‌ ಸಮುಚ್ಚಯವೊಂದರ ಮನೆಯಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಮಾಹಿತಿ ಸಿಕ್ಕಿತ್ತು. ಜ.7ರಂದು ಬಿಡಿಎಸ್‌ ವಿದ್ಯಾರ್ಥಿ ನೀಲ್‌ಕಿಶೋರ್‌ ರಾಮ್‌ಜಿ ಷಾ ಎಂಬಾತನನ್ನು ಬಂಧಿಸಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದೆವು. ಇಂಗ್ಲೆಂಡ್‌ ನಿವಾಸಿಯಾಗಿದ್ದ ಆತ ಅನಿವಾಸಿ ಭಾರತೀಯ ಕೋಟಾ ಅಡಿ 15 ವರ್ಷಗಳಿಂದ ನಗರದಲ್ಲಿ ವಾಸವಾಗಿರುವುದು ಹಾಗೂ ನಗರದ ಪ್ರತಿಷ್ಠಿತ ದಂತ ವೈದ್ಯ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಬಿಡಿಎಸ್‌ ವಿದ್ಯಾರ್ಥಿಯಾಗಿರುವುದು ಕಂಡು ಬಂದಿತ್ತು.

  ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದಾಗ, ನಗರ ಪ್ರತಿಷ್ಠಿತ ವೈದ್ಯಕಿಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳೂ ಗಾಂಜಾ ಮಾರಾಟ ಮತ್ತು ಸೇವನೆಯಲ್ಲಿ ತೊಡಗಿರುವುದು ಗೊತ್ತಾಯಿತು. ಈ ಮಾಹಿತಿ ಆಧಾರದಲ್ಲಿ ಮತ್ತೆ 9 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಈ ವೇಳೆ ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ಪೂರಕ ಸಾಕ್ಷ್ಯಾಧಾರ ಸಿಕ್ಕಿದ್ದರಿಂದ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಹೆಚ್ಚಿನ ವಿಚಾರಣೆ ಸಲುವಾಗಿ ಎರಡು ದಿನ ಪೊಲೀಸ್‌ ಕಸ್ಟಡಿಗೆ ಪಡೆದಿದ್ದೇವೆ’ ಎಂದರು.

  ಸಿಸಿಆರ್‌ಬಿ ಎಸಿಪಿ ರವೀಶ್‌, ನಗರ ಅಪರಾಧ ಪತ್ತೆದಳ (ಸಿಸಿಬಿ) ಇನ್‌ಸ್ಪೆಕ್ಟರ್‌ ಶ್ಯಾಮಸುಂದರ್‌, ಸುರತ್ಕಲ್‌ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ನೇತೃತ್ವದಲ್ಲಿ ಮಂಗಳವಾರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಗಾಂಜಾವನ್ನೂ ವಶಕ್ಕೆ ಪಡೆದಿದ್ದೇವೆ. ಅಲ್ಲದೇ ಡ್ರ್ಯಾಗರ್‌,  ಮೊಬೈಲ್, ಡೈರಿ, ಹಾಗೂ ಇತರ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ವಶಕ್ಕೆ ಪಡೆದಿದ್ದೇವೆ. ನೀಲ್‌ಕಿಶೋರ್‌ ರಾಮ್‌ಜಿಯಿಂದ 2 ಕೆ.ಜಿ.ಗೂ ಅಧಿಕ ಗಾಂಜಾ ವಶಕ್ಕೆ ಪಡೆದಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

  ‘ಬಂಧಿತ ಯುವತಿಯರು ಎಂಬಿಬಿಎಸ್‌ ಮತ್ತು ಬಿಡಿಎಸ್‌ ಅಂತಿಮ ವರ್ಷದಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದಾರೆ. ಐವರು ಪುರುಷರಲ್ಲಿ ಇಬ್ಬರು ಈಗಾಗಲೇ ವೈದ್ಯಕೀಯ ಅಧಿಕಾರಿಗಳಾಗಿದ್ದಾರೆ. ಒಬ್ಬ ಎಂ.ಡಿ. ಅಧ್ಯಯನ ಮಾಡುತ್ತಿದ್ದಾರೆ. ಇನ್ನಿಬ್ಬರು ಬಿಡಿಎಸ್‌ ವಿದ್ಯಾರ್ಥಿಗಳು. ಆರೋಪಿಗಳು ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾದ ಹಾಗೂ ಸೇವನೆ ಮಾಡಿದ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಪಾರ್ಟಿ ಮಾಡುವ ಸಂದರ್ಭದಲ್ಲಿ ಮಾದಕ ದ್ರವ್ಯ ಬಳಸಿದ್ದಾರೆ. ಈ ಆರೋಪಿಗಳಿಂದ ಕಲೆ ಹಾಕಿದ ಮಾಹಿತಿ ಆಧಾರದಲ್ಲಿ ಇನ್ನಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದರು.

  Share Information
  Advertisement
  Click to comment

  You must be logged in to post a comment Login

  Leave a Reply