Connect with us

    DAKSHINA KANNADA

    ರೇಬೀಸ್ ನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿ ಆತಂಕದಲ್ಲಿ ಇಡೀ ಊರು

    ರೇಬೀಸ್ ನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿ ಆತಂಕದಲ್ಲಿ ಇಡೀ ಊರು

    ಮಂಗಳೂರು ಸೆಪ್ಟೆಂಬರ್ 4: ಮಾರಕ ರೇಬೀಸ್ ವೈರಾಣುವಿನಿಂದ ಮೃತಪಟ್ಟ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಇಡೀ ಊರಿನ ಜನ ಈಗ ರೇಬೀಸ್ ಚುಚ್ಚುಮದ್ದು ಪಡೆದುಕೊಳ್ಳಬೇಕಾದ ಸ್ಥಿತಿ ಬಂದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಚ್ಲಂಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಆಶಿತ್ ಎಂಬ ಯುವಕ ಆಗಸ್ಟ್ 22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಮೃತದೇಹವನ್ನು ಮನೆ ಮಂದಿಗೆ ನೀಡುವ ಸಂದರ್ಭದಲ್ಲಿ, ಯುವಕ ರೇಬೀಸ್ ವೈರಾಣುವಿನಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಲಾಗಿತ್ತು, ಅಲ್ಲದೆ ಮೃತದೇಹವನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಸೂಚನೆಯನ್ನೂ ಸಹ ವೈದ್ಯರು ನೀಡಿದ್ದರು. ಆದರೆ ವೈದ್ಯರ ಸೂಚನೆಯನ್ನು ಪಾಲಿಸದ ಮನೆ ಮಂದಿ ಸಂಪ್ರದಾಯದಂತೆ ಅಂತ್ಯಸಂಸ್ಕಾರವನ್ನು ನಿರ್ವಹಿಸಿದ್ದರು.

    ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಮೃತದೇಹಕ್ಕೆ ಸ್ನಾನ ಮಾಡಿಸಲು ಪ್ಯಾಕ್ ಮಾಡಿದ್ದ ಮೃತದೇಹವನ್ನು ಬಿಚ್ಚಿದ್ದರು, ಈ ಸಂದರ್ಭ ಮೃತದೇಹದಿಂದ ರಕ್ತ ಮನೆಯ ಪ್ರದೇಶದಲ್ಲಿ ಚೆಲ್ಲಿತ್ತು. ಈ ಸಂದರ್ಭದಲ್ಲಿ ಮೃತ ಯುವಕನ ಸಂಬಂಧಿಕರು ಹಾಗೂ ಊರವರು ಭಾಗಿಯಾಗಿದ್ದರು.

    ಸಾವು ರೇಬೀಸ್ ರೋಗದಿಂದ ಸಂಭವಿಸಿದೆ ಎನ್ನುವ ವಿಚಾರವೀಗ ಊರವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇದೀಗ ಊರಿಡೀ ಆತಂಕಕ್ಕೆ ಕಾರಣವಾಗಿದೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ 67 ಮಂದಿ ನೆಲ್ಯಾಡಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆ್ಯಂಟಿ ರೇಬೀಸ್ ಚುಚ್ಚುಮದ್ದನ್ನು ಪಡೆದಿದ್ದಾರೆ. ಕೆಲವು ಮಂದಿ ಖಾಸಗಿ ಚಿಕಿತ್ಸಾಲಯದಲ್ಲೂ ಇಂಜೆಕ್ಷನ್ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಸೆಪ್ಟೆಂಬರ್ 3 ರ ತನಕ ಒಟ್ಟು 208 ಮಂದಿ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎಂದು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣಾನಂದ ತಿಳಿಸಿದ್ದಾರೆ. ರೇಬಿಸ್ ವೈರಾಣು ಸೊಂಕಿನಿಂದ ಮೃತಪಟ್ಟಿದ್ದರೂ ಅದು ಇತರರಿಗೆ ಹರಡುವ ಸಾಧ್ಯತೆ ತೀರಾ ಕಡಿಮೆ. ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯ ಇಲ್ಲ ಎಂದು ವೈದ್ಯರ ತಂಡ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply