Connect with us

    DAKSHINA KANNADA

    ದ.ಕ. ದಲ್ಲಿ1.20 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಜಯಭೇರಿ, ಅಭ್ಯರ್ಥಿ ಪದ್ಮರಾಜ್ ವಿಶ್ವಾಸ..!

    ಮಂಗಳೂರು: ದಕ್ಷಿಣ ಕನ್ನಡ  ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ 1.20 ಲಕ್ಷ ಮತಗಳ ಅಂತರದಿಂದ ಜಯಗಳಿಸಲಿದೆ ಎಂದು ಅಭ್ಯರ್ಥಿ ಪದ್ಮರಾಜ್  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

     

    ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು  ಚುನಾವಣೆಯ ದಿನದಂದು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಮತದಾರರ ಉತ್ಸಾಹ, ಸ್ಪಂದನೆ ಕಂಡು ಆತ್ಮವಿಶ್ವಾಸ ಹೆಚ್ಚಿದೆ. ಮತದಾನ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕಿತ್ತು. ಆದರೆ ದ.ಕ. ಜಿಲ್ಲೆಯಲ್ಲಿ ಉತ್ತಮ ಮತದಾನ ಆಗಿದೆ. ಕಾರ್ಯಕರ್ತರ ಆಶಯ, ಮತದಾರರು ಬದಲಾವಣೆ ಬಯಸಿರುವುದು ಜೂ. 4ರಂದು ಫಲಿತಾಂಶದ ದಿನ ತಿಳಿಯಲಿದೆ ಎಂದವರು ಹೇಳಿದರು.

    ಜಿಲ್ಲೆಯ ಅಭಿವೃದ್ಧಿ, ನೈಜ ವಿಚಾರವನ್ನು ಜನತೆಯ ಮುಂದಿಟ್ಟು ಪ್ರಚಾರ ಕಾರ್ಯ ನಡೆಸಿದ್ದು, ಪಕ್ಷದ ನಾಯಕರು, ಕಾರ್ಯಕರ್ತರು ಕುಟುಂಬವಾಗಿ ಚುನಾವಣೆ ಎದುರಿಸಿದ್ದೇವೆ. ಪ್ರತಿಯೊಬ್ಬರೂ ನನ್ನ ಜತೆ ಸಹಕರಿಸಿದ್ದು, ಎದುರಾಳಿಗಳ ದ್ವೇಷಕ್ಕೆ ಪ್ರತಿಯಾಗಿ ಪ್ರೀತಿಯಿಂದ ಮತದಾರರ ಮನವೊಲಿಸುವ ಕಾರ್ಯ ಮಾಡಲಾಗಿದೆ. ಕಾಂಗ್ರೆಸ್ ಈ ಹಿಂದೆ ಮಾಡಿರುವ ಅಭಿವೃದ್ಧಿ ಯೋಜನೆ, ಗ್ಯಾರಂಟಿ ಯೋಜನೆಗಳ ಮಾಹಿತಿ ಮನೆ ಮನೆಗೆ ತಲುಪಿಸುವ ಮೂಲಕ ಪ್ರೀತಿ ಹಂಚಲಾಗಿದೆ ಎಂದು ಅವರು ಹೇಳಿದರು. ಪಕ್ಷದ ಪ್ರಚಾರ ಕಾರ್ಯದಲ್ಲಿ ಸಹಕರಿಸಿದ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

    ಬಿಜೆಪಿಯವರು ಒಂದೂವರೆ ಲಕ್ಷದಿಂದ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಯಾರೂ ಸೋಲಲು ಸಿದ್ಧ ಇರುವುದಿಲ್ಲ. ಗೆಲ್ಲುವುದಕ್ಕಾಗಿಯೇ ಸ್ಪರ್ಧೆ ಮಾಡಿರುವುದು. ಆದರೆ ಬಿಜೆಪಿಯವರು ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ನಾವು ಇಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎಂದು ಈ ಹಿಂದೆ ಎಲ್ಲಿಯೂ ಹೇಳಿಲ್ಲ. ಜೂ. 4ರವರೆಗೆ ಎಲ್ಲರೂ ಸಂತೋಷದಿಂದ ಫಲಿತಾಂಶವನ್ನು ಎದುರು ನೋಡೋಣ ಎಂದರು.

    ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಮನೆ ಬೆಳಗುವ ಜತೆಗೆ, ಕುಟುಂಬಗಳಲ್ಲಿ ಆತ್ಮಸ್ಥೈರ್ಯ ತುಂಬಲಿದೆ. ಇದು ನಮ್ಮ ಗೆಲುವಿಗೆ ಮುಖ್ಯ ಕಾರಣವಾಗಲಿದೆ ಎಂದು ಹೇಳಿದ ಪದ್ಮರಾಜ್, ಕಳೆದ 35 ವರ್ಷಗಳಿಂದೀಚಿಗಿನ ಅಭಿವೃದ್ಧಿ ಹಾಗೂ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆಯಲ್ಲಾದ ಅಭಿವೃದ್ಧಿ ಬಗ್ಗೆ ಮತದಾರರಿಂದ ತುಲನೆಯೂ ಕಾಂಗ್ರೆಸ್ ಗೆಲುವಿಗೆ ಪೂರಕವಾಗಲಿದೆ ಎಂದರು.

    ಕಾಂಗ್ರೆಸ್ ಈ ಹಿಂದೆಯಾಗಲಿ ಈ ಬಾರಿಯಾಗಲಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಎದುರಿಸಿಲ್ಲ. ಅಭಿವೃದ್ಧಿ ವಿಚಾರಗಳು ಈ ಬಾರಿ ಚರ್ಚೆಯಾಗಿವೆ. ನಾನು ಯಾವತ್ತೂ ಜಾತಿ ಹೆಸರಿನಲ್ಲಿ ಮತ ಕೇಳಿಲ್ಲ. ಬದಲಾಗಿ ಆರ್ಥಿಕವಾಗಿ ಹಿಂದುಳಿ ವರ್ಗಗಳ ಶಕ್ತಿಯಾಗಿ ಕಾಂಗ್ರೆಸ್ ಗೆಲುವಿಗೆ ಸಹಕರಿಸುವಂತೆ ಮತದಾರರನ್ನು ಮನವಿ ಮಾಡಿದ್ದೇನೆ. ಅದಕ್ಕವರು ಸ್ಪಂದಿಸಿರುವ ವಿಶ್ವಾಸವಿದೆ ಎಂದವರು ಹೇಳಿದರು. ಗೋಷ್ಟಿಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ ಜೈನ್, ಶಶಿಧರ ಹೆಗ್ಡೆ, ಶುಭೋದಯ ಆಳ್ವ, ಮುಹಮ್ಮದ್ ಉಪಸ್ಥಿತರಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply