LATEST NEWS
ಮಂಗಳೂರು ಮಹಾ ಮಳೆಗೆ 20 ಕೋಟಿ ನಷ್ಟ

ಮಂಗಳೂರು ಮಹಾ ಮಳೆಗೆ 20 ಕೋಟಿ ನಷ್ಟ
ಮಂಗಳೂರು ಮೇ 31: ಮೇ 29 ರಂದು ಕರಾವಳಿಯಲ್ಲಿ ಸುರಿದಿದ್ದ ಮಹಾಮಳೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 20 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮೇ 29 ರಂದು ಮುಂಜಾನೆಯಿಂದ ಸತತ 6 ಗಂಟೆಗಳ ಕಾಲ ಸುರದಿ ಮಳೆ , ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಪಾರ ಆಸ್ತಿಪಾಸ್ತಿಯನ್ನು ಹಾನಿಗೊಳಿಸಿತ್ತು. ಈ ಮಹಾಮಳೆ ಮಂಗಳೂರು ಸೇರಿದಂತೆ ಜಿಲ್ಲಾದ್ಯಂತ ಜನ ಜೀವನವನ್ನೇ ಸ್ಥಬ್ದಗೊಳಿಸಿತ್ತು.

ಈ ನಡುವೆ ಮಹಾಮಳೆಯಿಂದ ಉಂಟಾದ ಹಾನಿಗಳ ಅಂದಾಜನ್ನು ಲೆಕ್ಕಹಾಕಲಾಗಿದ್ದು ಅಂದಾಜು 20 ಕೋಟಿ ರೂಪಾಯಿಯಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆಗಳು ಹಾನಿಗೊಂಡಿದ್ದು ಸುಮಾರು 3 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸೇತುವೆ ಹಾನಿಯಿಂದ 1 ಕೋಟಿ ರೂಪಾಯಿ, ಖಾಸಗಿ ಕಟ್ಟಡಗಳ ಹಾನಿ 3.5 ಕೋಟಿ ರೂಪಾಯಿ, ವಿದ್ಯುತ್ ಸಂಪರ್ಕ ವ್ಯವಸ್ಥೆಯ ಪರಿಕರಗಳ ಹಾನಿ 2 ಕೋಟಿ ರೂಪಾಯಿ ಸೇರದಂತೆ ಇನ್ನಿತರ ನಷ್ಟಗಳು ಸೇರಿ ಒಟ್ಟು 20 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಮಹಾಮಳೆಗೆ ಜಿಲ್ಲೆಯಲ್ಲಿ ಒಟ್ಟು 35 ಮನೆಗಳು ಸಂಪೂರ್ಣ ಹಾನಿ ಗೊಂಡಿದ್ದು ಇವುಗಳ ಪೈಕಿ 31 ಮನೆಗಳು ಮಂಗಳೂರು ನಗರದ್ದಾಗಿರುವುದು ಗಮನಾರ್ಹ . ಅದಲ್ಲದೆ 42 ಮನೆಗಳು ಬಹುತೇಕ ಹಾನಿಗೊಂಡಿವೆ. ಮನೆ ಕಳೆದುಕೊಂಡ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಎರಡು ದಿನಗಳೊಳಗೆ ಪರಿಹಾರ ವಿತರಿಸಲಾಗುವುದೆಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.