Connect with us

  LATEST NEWS

  Easy Ayurveda: ಮಳೆಗಾಲದಲ್ಲಿ ಗಂಟು ನೋವು, ಸಂಧಿವಾತಕ್ಕೆ ಪರಿಹಾರ…

  ” ಹುಯ್ಯೋ ಹುಯ್ಯೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ ” ಅಂತ ಹಾಡ್ತಾ ಮಳೆಗಾಲವನ್ನು ನಾವೆಲ್ಲಾ ಸ್ವಾಗತಿಸಿದ್ದೇವೆ. ಈ ವರ್ಷದ ಬಿಸಿಲಿನ ಝಳಕ್ಕೆ ತತ್ತರಿಸಿದ ಜನಜೀವನವು, ವರ್ಷದ ಮೊದಲ ಮಳೆಯ ಹನಿಗಳಿಗೆ ಕಾತರದಿಂದ ಎದುರು ನೋಡಿದ್ದವು. ಆದರೆ ಮಳೆ ತನ್ನ ಹನಿಗಳ ಜೊತೆ ಬರುವಾಗ ವಾತಾವರಣದಲ್ಲಿ ಮತ್ತು ದೇಹದಲ್ಲಿ ಅನೇಕ ಬದಲಾವಣೆಗಳನ್ನು ಹೊತ್ತು ತಂದಿದೆ.

  ಈ ಮಳೆಗಾಲದ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಸಂಧಿಗಳಲ್ಲಿ ನೋವು ಮತ್ತು ಮೈ ಕೈ ನೋವು. ಈ ಆರೋಗ್ಯ ಸಮಸ್ಯೆಯನ್ನು ಎದುರಿಸಲು ನಮಗೆ ಆಯುರ್ವೇದ ಶಾಸ್ತ್ರವು ತುಂಬಾ ಪರಿಣಾಮಕಾರಿಯಾದ ಉಪಾಯಗಳನ್ನು ನಮ್ಮ ಮುಂದಿರಿಸುತ್ತದೆ. ಇನ್ನೇಕೆ ತಡ, ಬನ್ನಿ * ಮಳೆಗಾಲದಲ್ಲಿ ಸಂಧಿವಾತ, ಮೈ ಕೈ ನೋವು* ಇದರ ಕಾರಣ ಮತ್ತು ಸುಲಭೋಪಚಾರಗಳ ಬಗ್ಗೆ ತಿಳಿದುಕೊಳ್ಳೋಣ.

  ಸಂಧಿ ವಾತ ಎಂದರೇನು ?

  ಮನುಷ್ಯನ ದೇಹವು ಅನೇಕ ಮೂಳೆ, ಮಾಂಸ ಹಾಗು ನರಗಳಿಂದ ಕೂಡಿದೆ. ಎರಡು ಅಥವಾ ಮೂರು ಅಥವಾ ಅದಕ್ಕಿಂತ ಹೆಚ್ಚು ಮೂಳೆಗಳು ಸೇರುವ ಜಾಗಕ್ಕೆ ಸಂಧಿ ಎಂದು ಕರೆಯಲಾಗುತ್ತದೆ. ಎರಡು ಮೂಳೆಗಳ ನಡುವೆ ಅವುಗಳ ನಿತ್ಯ ಘರ್ಷಣೆಯಿಂದ ಉಂಟಾಗುವ ತೊಂದರೆಗಳನ್ನು ತಡೆಗಟ್ಟಲು, ಮೆನಿಸ್ಕಸ್ ಎನ್ನುವ ರಕ್ಷಣಾ ಕವಚವಿರುತ್ತದೆ. ಸಂಧಿಗಳನ್ನು ಒಂದೆಡೆ ಹಿಡಿದಿಡಲು ಮಾಂಸ ಪೇಶಿಗಳು,ಸ್ನಾಯು ಮತ್ತು ಖಂಡರಗಳು( ಲಿಗಮೆಂಟ್ ಮತ್ತು ಟೆಂಡಾಂಗಳು) ಸಹಾಯ ಮಾಡುತ್ತದೆ. ವಯೋ ಸಹಜ ಕಾರಣ, ಪೆಟ್ಟು, ವಾತಾವರಣದಲ್ಲಿ
  ಏರು ಪೆರು ಸಂಧಿವಾತವನ್ನು ಉಂಟುಮಾಡುತ್ತವೆ ಅಥವಾ ಈಗಾಲೇ ಇರುವ ನೋವನ್ನು ಹೆಚ್ಚಿಗೆ ಮಾಡುತ್ತವೆ.

  ಆಯುರ್ವೇದ ಶಾಸ್ತ್ರದ ಪ್ರಕಾರ ಮಳೆಗಾಲ ಮತ್ತು ಸಂಧಿವಾತದ ನಡುವಿನ ಸಂಬಂಧ.

  ಮಳೆಗಾಲ ವನ್ನು ” ವರ್ಷಾ ಋತು” ಎಂದು ಕರೆಯಲಾಗುತ್ತದೆ. ಇದು ಆಯುರ್ವೇದ ಶಾಸ್ತ್ರದ ಪ್ರಕಾರ ವಿಸರ್ಗ ಕಾಲದಲ್ಲಿ ಅಡಿಯಲ್ಲಿ ಬರುತ್ತದೆ. ವರ್ಷಾ ಋತು ವಿಸರ್ಗ ಕಾಲದ ಮೊದಲ ಋತು. ಹಿಂದಿನ ಋತುವಾದ ಗ್ರೀಷ್ಮ ಕಾಲದಲ್ಲಿ ಸೂರ್ಯನ ಝಳಕ್ಕೆ ದೇಹ ಮತ್ತು ಮನಸ್ಸು ಬಲಹೀನವಾಗಿರುತ್ತದೆ. ವರ್ಷಾ ಹಾಗು ತದ ನಂತರ ಬರುವ ಶರದ್ ಮತ್ತು ಹೇಮಂತ ಋತುವಿನಲ್ಲಿ ಶರೀರದ ಬಲ ಹಾಗು ಆರೋಗ್ಯ ವರ್ಧನೆಯಾಗುತ್ತದೆ. ಆದರೆ ಮಳೆಯ ಶೀತಲ, ರೂಕ್ಷ ಗುಣದ ಕಾರಣದಿಂದ ವಾತ ದೋಷವು ಪ್ರಕುಪಿತಗೊಳ್ಳುತ್ತದೆ. ಹೀಗೆ ಪ್ರಕುಪಿತಗೊಂಡ ವಾತ ದೋಷವು ಯಾವಾಗ ಸಂಧಿಗಳಲ್ಲಿ ಸಂಚರಿಸುವುದೋ ಆಗ ಸಂಧಿಗಳಲ್ಲಿ ನೋವು, ಉರಿ, ಉರಿಯೂತ ಮತ್ತು ಹಿಡಿದಂತೆ ಆಗುವುದು. ಇದನ್ನು ಸಾಮಾನ್ಯ ಭಾಷೆಯಲ್ಲಿ ” ಸಂಧಿ ವಾತ” ಎಂದು ಕರೆಯಲಾಗುತ್ತದೆ. ಸಂಧಿಗಳ ಜೊತೆ ವಾತ ದೋಷವು ಮಾಂಸ ಪೇಶಿಗಳಲ್ಲೂ ನೋವು, ಹಿಡಿದಂತಾಗುವುದು ಹಾಗು ಇನ್ನೂ ಅನೇಕ ತೊಂದರೆಗಳನ್ನು ಉಂಟು ಮಾಡುತ್ತದೆ.

  ಸಂಧಿ ವಾತದ ಸಾಮಾನ್ಯ ಕಾರಣಗಳು.
  1. ತೇವಾಂಶದ ಉಲ್ಬಣ:
  ಮಳೆಗಾಲದಲ್ಲಿ ಶೀತ ಮತ್ತು ತೆವಾಂಶದಲ್ಲಿ ಇರುವ ಶೀತತೆಯ ಕಾರಣದಿಂದ ವಾತದೋಷವನ್ನು ಉಲ್ಬಣಗೊಳ್ಳುತ್ತದೆ. ಇದು ಸಂಧಿಗಳಲ್ಲಿ ಶೀತ ಮತ್ತು ವಾತದ ಬಾಧೆ ಉಂಟುಮಾಡುತ್ತದೆ.

  2. ತಾಪಮಾನದಲ್ಲಿ ಬದಲಾವಣೆ:
  ತಾಪಮಾನದಲ್ಲಿ ತೀವ್ರ ಬದಲಾವಣೆಗಳು, ಶೀತ ಮತ್ತು ತೇವದೊಂದಿಗೆ, ಸಂಧಿಗಳಲ್ಲಿ ವೇದನೆ ಉಂಟುಮಾಡುತ್ತದೆ.

  3. ಚಲನೆ ಮತ್ತು ವ್ಯಾಯಾಮದಲ್ಲಿ ಕೊರತೆ.
  ಮಳೆಗಾಲದಲ್ಲಿ ಹೊರಗೆ ಹೋಗುವುದು ಕಡಿಮೆಯಾಗುವುದರ ಪರಿಣಾಮವಾಗಿ ಚಲನೆಯಲ್ಲಿ ಹಾಗು ವ್ಯಾಯಾಮದಲ್ಲಿ ಕೊರತೆ ಉಂಟಾಗುತ್ತದೆ. ಇದರಿಂದಾಗಿ ಸಂಧಿಗಳಲ್ಲಿ ಬಿಗಿತ ಉಂಟಾಗುತ್ತದೆ.

  4. ಅತಿಯಾದ ಶೀತ:
  ಮಳೆಗಾಲದಲ್ಲಿ ಅತಿಯಾದ ಶೀತ, ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ಇರುವುದರಿಂದ ಸಂಧಿಗಳಲ್ಲಿ ನೋವುಗಳನ್ನು ಹೆಚ್ಚಿಸುತ್ತದೆ.

  ಸಂಧಿವಾತದ ಲಕ್ಷಣಗಳು

  • ಮೊಣಕಾಲು, ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಶೀತ ಹಾಗು ಮಳೆಯ ಕಾಲದಲ್ಲಿ ನೋವು ಹೆಚ್ಚಾಗುತ್ತದೆ.
  • ಏಳಲು ಕೂರಲು ಕಷ್ಟವಾಗುವುದು
  • ನಿಲ್ಲುವಾಗ ಹಾಗು ನಡಿಯುವಾಗ ಸಹ ನೋವು ಕಂಡು ಬರುತ್ತದೆ.
  • ಕೈ ಕಾಲುಗಳಲ್ಲಿ ಜಮ್ಮು ಹಿಡಿದಂಟಾಗುವುದು.
  • ನಿಶ್ಶಕ್ತಿ, ಸುಸ್ತು
  • ಆಯುರ್ವೇದದ ಮೂಲಕ ತಡೆಯುವ ಮತ್ತು ನಿರ್ವಹಿಸುವ ಸುಲಭ ಮಾರ್ಗಗಳು:
  • ಬಾರ್ಲಿ, ಅಕ್ಕಿ, ಗೋಧಿ, ಬೇಳೆ ಮತ್ತು ತರಕಾರಿಗಳಿಂದ ತಯಾರಿಸಿದ ಸೂಪ್ ಸೇವನೆ ದೇಹಕ್ಕೆ ಶಾಖ ಒದಗಿಸುತ್ತವೆ ಮತ್ತು ನೋವನ್ನು ಶಮನ ಗೊಳಿಸುತ್ತದೆ.

  ವ್ಯಾಯಾಮ ಮತ್ತು ಯೋಗ:
  ಆಯುರ್ವೇದದಲ್ಲಿ ನಿಯಮಿತ ವ್ಯಾಯಾಮ ಮತ್ತು ಯೋಗ ಪ್ರಾಕ್ಟಿಸ್ ಮಾಡುವುದನ್ನು ಶಿಫಾರಸು ಮಾಡಲಾಗುತ್ತದೆ. ಇದು ಸಂಧಿಗಳಲ್ಲಿ ರಕ್ತಸಂಚಲನವನ್ನು ಸುಧಾರಿಸುತ್ತದೆ ಮತ್ತು ಸಂಧಿಗಳಲ್ಲಿನ ಬಿಗಿತವನ್ನು ಕಡಿಮೆ ಮಾಡುತ್ತದೆ. ಸೂರ್ಯನಮಸ್ಕಾರ,
  ದಂಡಾಸನ,ಪಾದಾನ್ಗಷ್ಟಾಸನ, ಬದ್ದಕೋನಾಸನ ನಂತಹ ಯೋಗಾಸನಗಳು ಸಂಧಿ ನೋವುಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ.

  ತೈಲ ಅಭ್ಯಂಗ ಮತ್ತು ಸ್ವೇದ:
  ಆಯುರ್ವೇದದಲ್ಲಿ ಎಣ್ಣೆಯಿಂದ ಅಭ್ಯಂಜನದ ಕ್ರಮವನ್ನು ವಿವರವಾಗಿ ತಿಳಿಸಲಾಗಿದೆ. ಮಹಾನಾರಾಯಣ ತೈಲ, ದಶಮೂಲ ತೈಲ, ಧನ್ವಂತರಿ ತೈಲ, ಕಾರ್ಪೂರದಿ ತೈಲ ಅಥವಾ ಶುದ್ಧ ತಿಲ ತೈಲವನ್ನು ಬಳಸಿಕೊಂಡು ಸಂಧಿಗಳಲ್ಲಿ ಅಭ್ಯಂಗ ಮಾಡುವುದು ಮತ್ತು ಬಿಸಿ ಶಾಖ ( ಸ್ವೇದ) ಕೊಡುವುದು ವೇದನೆ ಮತ್ತು ಊಟವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಡೆದಾಡಲು ಇದ್ದ ತೊಂದರೆ ಕಡಿಮೆಯಾಗುತ್ತದೆ.

  ಸ್ವೇದನ – ಉಷ್ಣ ಚಿಕಿತ್ಸೆ:
  ಮಳೆಗಾಲದಲ್ಲಿ ಉಷ್ಣ ಚಿಕಿತ್ಸೆ, ಮುಖ್ಯವಾಗಿ ಹಾಟ್ ವಾಟರ್ ಬ್ಯಾಗ್ ಅಥವಾ ಸ್ಟೀಮ್ ಬಾತ್ ಉಪಯೋಗಿಸುವುದು ಸಂಧಿಗಳ ನೋವುಗಳನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.

  ಆಹಾರ ಮತ್ತು ಪಾನೀಯ:
  ಆಯುರ್ವೇದದಲ್ಲಿ ಶೀತವನ್ನು ತಡೆದುಕೊಳ್ಳಲು ಮತ್ತು ವಾತದೋಷವನ್ನು ಸಮತೋಲನಗೊಳಿಸಲು ಅಡುಗೆಯಲ್ಲಿ ಸಾಸಿವೆ, ಇಂಗು, ಶುಂಠಿ, ಬೆಲ್ಲ, ಮತ್ತು ಹಾಲು ಬಳಸುವುದು ಉತ್ತಮ.

  ಟೀ ಮತ್ತು ಕಾಫಿಯ ಸೇವನೆ ಕಡಿಮೆ ಇರಲಿ: ಟೀ ಮತ್ತು ಕಾಫಿಯ ಸೇವನೆ ಮಾಡುವುದರಿಂದ ಶರೀರದಲ್ಲಿ ವಾತ ದೋಷವು ಹೆಚ್ಚಾಗುವ ಸಾಧ್ಯತೆಗಳಿವೆ. ಆದ್ದರಿಂದ ಕಾಫಿ ಮತ್ತು ಟೀ ಸೇವನೆ ಕಡಿಮೆ ಮಾಡಿ, ಅದರ ಬದಲಿಗೆ ಅಶ್ವಗಂಧ, ಶುಂಠಿ, ದೇವದಾರು, ನಿರ್ಗುಂಡಿ ಮತ್ತು ಇತರ ವಾತ ನಾಶಕ ಗುಣ ಹೊಂದಿರುವ ಔಷಧೀಯ ಗುಣಗಳನ್ನು ಹೊಂದಿರುವ ಮೂಲಿಕೆಗಳಿಂದ ತಯಾರಾದ ಕಷಾಯದ ಸೇವನೆ ಮಾಡುವುದು.

  ಧ್ಯಾನ :
  ಆಯುರ್ವೇದದಲ್ಲಿ ಧ್ಯಾನಕ್ಕೆ ಪ್ರಮುಖ ಭೂಮಿಕೆ ಇರುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಶರೀರದ ಎಲ್ಲಾ ದೋಷಗಳನ್ನು ಸಮತೋಲನಲದಲ್ಲಿ
  ಇಡುತ್ತದೆ.

  ಆಯುರ್ವೇದ ವೈದ್ಯರ ಸಲಹೆ:
  ಸಂಧಿ ನೋವುಗಳನ್ನು ತಡೆದುಕೊಳ್ಳಲು ಮತ್ತು ನಿರ್ವಹಿಸಲು ಆಯುರ್ವೇದ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಬಹಳ ಮುಖ್ಯ. ವೈದ್ಯರು ಪಂಚಕರ್ಮ, ಅಭ್ಯಂಗ, ಕಷಾಯಧಾರ, ಜಾನು ಬಸ್ತಿ, ಕಟಿ ಬಸ್ತಿ, ಗ್ರೀವ ಬಸ್ತಿ, ಶಷ್ಟಿಕಾಶಾಲಿ ಪಿಂಡ ಸ್ವೇದ, ಬಾಷ್ಪ ಸ್ವೇದ ,ಸಂಧಿ ಲೇಪ, ಉಪನಾಹ, ಮುಂತಾದ ಚಿಕಿತ್ಸಾ ಕ್ರಮಗಳನ್ನೂ ಅನುಸರಿಸುವುದು. ವಾತ ನಾಶಕ ಕಷಾಯಗಳಾದ ದಶಮೂಲ ಕಷಾಯ, ರಾಸ್ನ ಕಷಾಯ, ಸೇವನೆಯನ್ನು ವೈದ್ಯರ ಸಲಹೆಯ ಮೇರೆಗೆ ಸೇವಿಸುವುದು.

  ಮಳೆಗಾಲದಲ್ಲಿ ಸಂಧಿ ನೋವು, ಮೈ ಕೈ ನೋವುಗಳಾಗುವುದು ಸಾಮಾನ್ಯ ಸಮಸ್ಯೆಯಾಗಿದ್ದು, ಆಯುರ್ವೇದದ ಮೂಲಕ ಅವುಗಳನ್ನು ತಡೆದುಕೊಳ್ಳಲು ಮತ್ತು ನಿರ್ವಹಿಸಲು ಹಲವಾರು ಮಾರ್ಗಗಳಿವೆ. ಈ ಪಥ್ಯಗಳನ್ನು ಅನುಸರಿಸುವ ಮೂಲಕ, ಶೀತ ಮತ್ತು ತೇವದಿಂದ ಉಂಟಾಗುವ ಸಂಧಿ ನೋವುಗಳನ್ನು ತಡೆಯಬಹುದು. ಆಯುರ್ವೇದದ ಚಿಕಿತ್ಸೆ, ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದರಿಂದ, ಸಂಧಿ ನೋವುಗಳನ್ನು ಕಡಿಮೆ ಮಾಡಬಹುದು ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು.

  Share Information
  Advertisement
  Click to comment

  You must be logged in to post a comment Login

  Leave a Reply