LATEST NEWS
ಪೊಲೀಸ್ ಇಲಾಖೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ – ಎಸ್ ಡಿಪಿಐ

ಮಂಗಳೂರು ಜುಲೈ 03: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಪೊಲೀಸ್ ಇಲಾಖೆ ಮಾತನಾಡಿದವರ ಮೇಲೆ ನೊಟೀಸ್ ಬಿಡ್ತಿದೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ವೇಗ ಕಡಿಮೆಯಾಗಿದ್ದು, ಇದೀಗ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಪೊಲೀಸ್ ಇಲಾಖೆ ಮಾಡ್ತಿದೆ, ಸಾಮಾಜಿಕ ತಾಣ ಹಾಗೂ ಭಾಷಣ ಮಾಡೋರಿಗೆ ನೊಟೀಸ್ ನೀಡಲಾಗ್ತಿದೆ. ಪ್ರತಿಭಟನೆ ಮಾಡುವವರಿಗೆ ಇನ್ನಿಲ್ಲದ ನಿಬಂಧನೆಗಳನ್ನು ಹಾಕಲಾಗುತ್ತಿದ್ದು, ಹೊಸ ಹೊಸ ಕಾನೂನುಗಳನ್ನು ತಂದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲಾಗ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ನಡೆದ ಘಟನೆಗಳಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳ ಬದಲಾವಣೆ ಆಗಿದೆ. ಆ ಬಳಿಕ ಬಂದ ಬಿಜೆಪಿ ನಾಯಕರುಗಳಾದ ಆರ್.ಅಶೋಕ್, ವಿಜಯೇಂದ್ರ ಬಂದು ಅಧಿಕಾರಿಗಳಿಗೆ ಒತ್ತಡ ತರುವ ಕೆಲಸ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟಿದ್ದೇವೆ ಅಂತ ಬಹಿರಂಗವಾಗಿ ಹೇಳಿದ್ದಾರೆ. ಅದರ ಬಳಿಕ ದ.ಕ ಜಿಲ್ಲೆಯಲ್ಲಿ ಪೊಲೀಸ್ ಕಾರ್ಯಾಚರಣೆಯ ವೇಗ ಕಡಿಮೆಯಾಗಿದೆ. ಪೊಲೀಸರ ಕಠಿಣ ಕ್ರಮಗಳು ಜಿಲ್ಲೆಯಲ್ಲಿ ಮತ್ತೆ ಕಡಿಮೆಯಾಗಿದೆ. ದ.ಕ ಜಿಲ್ಲೆಯ ಪೊಲೀಸರು ಈಗ ಎಲ್ಲದಕ್ಕೂ ನೊಟೀಸ್ ಕೊಡುವ ಕೆಲಸ ಮಾಡುತ್ತಿದ್ದಾರೆ.
ಭರತ್ ಕುಮ್ಡೇಲು, ಶ್ರೀಕಾಂತ್ ಶೆಟ್ಟಿ ಹೇಳಿಕೆಗಳಿಂದಲೇ ಅಬ್ದುಲ್ ರೆಹಮಾನ್ ಹತ್ಯೆ ನಡೆದಿದೆ. ಆದರೆ ತಿಂಗಳು ಕಳೆದರೂ ಇವರಿಬ್ಬರ ಬಂಧನ ಇನ್ನೂ ಆಗಿಲ್ಲ. ಸುಹಾಸ್ ಶೆಟ್ಟಿ ಕೇಸ್ ನಲ್ಲಿ ಎನ್ಐಎ ತನಿಖೆಗೆ ವಹಿಸಲಾಗಿದೆ. ರೌಡಿ ಹಿನ್ನೆಲೆಯ ಸುಹಾಸ್ ಹತ್ಯೆ ಕೇಸ್ ಗೆ ಯುಎಪಿಎ ಹಾಕಲಾಗ್ತಿದೆ ಎಂದರು. ಆದರೆ ಅಬ್ದುಲ್ ರೆಹಮಾನ್ ಕೊಲೆ ಕೇಸ್ ಗಳಲ್ಲಿ ಪ್ರಮುಖ ಆರೋಪಿಗಳ ಬಂಧನವೇ ಆಗ್ತಿಲ್ಲ, ಈ ಹಿನ್ನಲೆ ರೆಹಮಾನ್ ಹಾಗೂ ಅಶ್ರಫ್ ಹತ್ಯೆ ಕೇಸ್ ಗೆ ಎಸ್ ಐಟಿ ರಚನೆ ಮಾಡಬೇಕು, ಈ ಎರಡೂ ಕೊಲೆ ಕೇಸ್ ನ ಸಂತ್ರಸ್ತರ ಕುಟುಂಬಗಳಿಗೆ ಐವತ್ತು ಲಕ್ಷ ಪರಿಹಾರ ನೀಡಬೇಕು ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಆಗ್ರಹಿಸಿದ್ದಾರೆ.