Connect with us

KARNATAKA

ಧಾರವಾಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಕಳ್ಳತನ ಪ್ರಕರಣ – 10 ಮಂದಿ ಅರೆಸ್ಟ್..!​​​

ಧಾರವಾಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಘದ ಮೂವರು ಸದಸ್ಯರು ಸೇರಿ 10 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ನಗರದ ಹೊರವಲಯದ ರಾಯಾಪುರದಲ್ಲಿ ಈ ಘಟನೆ ನಡೆದಿತ್ತು. ರಾಯಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪ್ರಾದೇಶಿಕ ಕಚೇರಿಯಲ್ಲಿ ಕಳೆದ ಅಕ್ಟೋಬರ್ 24 ರಂದು ಕಳ್ಳತನವಾಗಿತ್ತು. ಕಚೇರಿಯ ಲಾಕರ್‌ನಲ್ಲಿದ್ದ 1 ಕೋಟಿ 24 ಲಕ್ಷ ರೂ. ಹಣ ಕಳವಾಗಿತ್ತು. ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಎಲ್ಲ ವ್ಯವಹಾರ, ಕಚೇರಿ ಕೆಲಸಗಳು ಇಲ್ಲಿಯೇ ನಡೆಯುತ್ತವೆ. ಆದರೆ ಇಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರಲಿಲ್ಲ.

ಅಂದು ಕಚೇರಿ ಹಿಂಭಾಗದಲ್ಲಿನ ಶೌಚಾಲಯದ ಕಿಟಕಿ ಮುರಿದು ಒಳ ಬಂದಿದ್ದ ಕಳ್ಳರು ಒಟ್ಟು 4 ಲಾಕರ್‌ಗಳನ್ನು ಮುರಿದು ಅಲ್ಲಿದ್ದ ಅಷ್ಟೂ ಹಣ ದೋಚಿದ್ದರು. ವಿವಿಧ ಹಳ್ಳಿಗಳ ಸ್ವ-ಸಹಾಯ ಸಂಘಗಳಿಂದ ಸಂಗ್ರಹಿಸಿದ ಹಣ ಇದಾಗಿತ್ತು. ಹೀಗಾಗಿ ಯಾರೋ ಸಂಘದಲ್ಲಿ ಇದ್ದವರೇ ಶಾಮೀಲಾಗಿದ್ದಾರೆ ಅನ್ನೋ ಶಂಕೆಯನ್ನಿಟ್ಟುಕೊಂಡು ತನಿಖೆ ಮಾಡಿದ ಪೊಲೀಸರು ಕೊನೆಗೂ 10 ಮಂದಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣ ವಿದ್ಯಾಗಿರಿ ಠಾಣೆಯಲ್ಲಿ ದಾಖಲಾಗಿದ್ದು, ಇದಕ್ಕಾಗಿಯೇ ಪೊಲೀಸ್ ಆಯುಕ್ತರು ವಿಶೇಷ ತನಿಖಾ ತಂಡ ರಚಿಸಿದ್ದರು. ಹುಬ್ಬಳ್ಳಿಯ ಕುಶಾಲ ಕುಮಾರ ಕೃಷ್ಣಾ ಸವಣೂರ, ನವಲಗುಂದದವರಾದ ಬಸವರಾಜ ಶೇಖಪ್ಪ ಬಾಬಜಿ, ಜಿಲಾನಿ ಬವರಸಾಬ ಜಮಾದಾರ, ಪರಶುರಾಮ ಹನಮಂತಪ್ಪ ನೀಲಪ್ಪಗೌಡರ, ಮಹಾಂತೇಶ ಲಕ್ಷ್ಮಣ ಹಿರಗಣ್ಣವರ, ರಂಗಪ್ಪ ನಾಗಪ್ಪ ಗುಡಾರದ, ಮಂಜುನಾಥ ಯಮನಪ್ಪ ಬೋವಿ, ಕಿರಣ ಶರಣಪ್ಪ ಕುಂಬಾರ, ರಜಾಕ ಅಹ್ಮದ ಅಲ್ಲಾವುದ್ದೀನ್ ಮುಲ್ಲಾನವರ ಮತ್ತು ವೀರೇಶ ಸಿದ್ದಪ್ಪ ಚವಡಿ ಎಂಬುವವರನ್ನು ಬಂಧಿಸಿದ್ದಾರೆ. ಜೊತೆಗೆ 79 ಲಕ್ಷ 89 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಕಳ್ಳತನಕ್ಕೆ ಬಳಸಿದ್ದ 1 ಕಾರು, 2 ಬೈಕ್ ಮತ್ತು 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನದ ಕಿಂಗ್‌ಪಿನ್ SKRDP ಸಿಬಂದಿ

ಬಂಧಿತರ ಪೈಕಿ ಕುಶಾಲಕುಮಾರ, ಬಸವರಾಜ್ ಮತ್ತು ಮಹಾಂತೇಶ ಇದೇ ಸಂಘದ ಸಿಬ್ಬಂದಿಯೇ ಆಗಿದ್ದಾರೆ. ಈ ಮೂವರು ಸೇರಿ ಕಳ್ಳತನಕ್ಕೆ ಎಲ್ಲಿಂದ ಬರಬೇಕು, ಹೇಗೆ ಬರಬೇಕು, ಎಲ್ಲಿ ಲಾಕರ್ ಇವೆ ಎಂಬುದನ್ನೆಲ್ಲ ಸ್ಕೆಚ್ ಹಾಕಿ, ಪ್ಲ್ಯಾನ್ ಮಾಡಿದ್ದರು. ಇದನ್ನು ಕಾರ್ಯಗತಗೊಳಿಸಲು ಈಗಾಗಲೇ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನವಲಗುಂದದ ಗ್ಯಾಂಗ್‌ಗೆ ನೀಡಿದ್ದರು. ಹೀಗಾಗಿ ಸಲೀಸಾಗಿ ಬಂದು ಕದ್ದುಕೊಂಡು ಹೋಗಿದ್ದರು.

ಸದ್ಯ ಪ್ರಕರಣ ಬೇಧಿಸಿ ಕಳ್ಳರನ್ನು ಜೈಲಿಗೆ ಅಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply