Connect with us

    DAKSHINA KANNADA

    ದ.ಕ. ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ಹೆಚ್ಚಳ: ಪ್ರಮೀಳಾ ನಾಯ್ಡು

    ಮಂಗಳೂರು, ಮಾರ್ಚ್ 02: “ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯಿದೆ’ಯಡಿ ದ.ಕ. ಜಿಲ್ಲೆಯಲ್ಲಿ 3 ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದು ಇದಕ್ಕೆ ಮಹಿಳೆ ಯರಲ್ಲಿ ರಕ್ಷಣೆಯ ಬಗ್ಗೆ ಉಂಟಾಗಿರುವ ಜಾಗೃತಿ ಕಾರಣವಾಗಿರಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

    ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರೇಮ ಪ್ರಕರಣ, ಅಕ್ರಮ ಸಂಬಂಧದ ಕಲಹ ಮೊದಲಾದವುಗಳು ಹೆಚ್ಚಾಗಿ ವರದಿಯಾಗಿವೆ. ಆಯೋಗವು ರಾಜ್ಯದಲ್ಲಿ 2020ರಿಂದ ಇದುವರೆಗೆ ಒಟ್ಟು 6,728 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 4,120 ಪ್ರಕರಣ ಗಳನ್ನು ಇತ್ಯರ್ಥ ಪಡಿಸಲಾ ಗಿದ್ದು, 2,608 ಇತ್ಯರ್ಥಕ್ಕೆ ಬಾಕಿಯಿವೆ. ಈ ದೂರುಗಳ ಪೈಕಿ 1,494 ಪ್ರಕರಣಗಳು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ್ದಾಗಿವೆ. 1,905 ಪ್ರಕರಣಗಳು ರಕ್ಷಣೆ ಕೋರಿ, 347 ವರದಕ್ಷಿಣೆ ಕಿರುಕುಳ, 26 ವರದಕ್ಷಿಣೆ ಸಾವು/ಕೊಲೆ, 37 ಲೈಂಗಿಕ ದೌರ್ಜನ್ಯ, 208 ಪೊಲೀಸ್‌ ದೌರ್ಜನ್ಯ ಪ್ರಕರಣಗಳಾಗಿವೆ. ಸ್ವಯಂ ಪ್ರೇರಿತವಾಗಿ 1,053 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಹದಿಹರೆಯದವರಲ್ಲಿ ಜಾಗೃತಿ ಅಗತ್ಯ: ಹದಿಹರೆಯದವರನ್ನು ಹಾದಿ ತಪ್ಪಿಸುತ್ತಿರುವ ಲವ್‌ ಅಫೇರ್‌, ಲಿವ್‌ ಇನ್‌ ರಿಲೇಶನ್‌ಶಿಪ್‌ ಮತ್ತು ಸೈಬರ್‌ ಅಪರಾಧಗಳು ಕಳವಳಕಾರಿಯಾಗಿದೆ. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ವ್ಯಾಪಕ ಜಾಗೃತಿಗೆ ಆದ್ಯತೆ ನೀಡಲಾಗುತ್ತಿದೆ. ನೈತಿಕ ಮೌಲ್ಯಗಳ ಬಗ್ಗೆ ತರಗತಿಗಳನ್ನು ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ದ.ಕ.: 722 ಪ್ರಕರಣ : ಜಿ.ಪಂ. ಸಿಇಒ ಡಾ| ಕುಮಾರ್‌ ಮಾತನಾಡಿ, ಮಹಿಳೆಯರ ರಕ್ಷಣಾಧಿಕಾರಿಯಾಗಿರುವ ಶಿಶು ಅಭಿವೃದ್ಧಿ ಅಧಿಕಾರಿ ಬಳಿ 2020ರ ಮಾರ್ಚ್‌ನಿಂದ ಇದುವರೆಗೆ 722 ಪ್ರಕರಣಗಳು ದಾಖಲಾಗಿದ್ದು 520 ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಪಡಿಸಲಾಗಿದೆ. 170 ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಜಿಲ್ಲೆಯಲ್ಲಿ 5 ಸಾಂತ್ವನ ಕೇಂದ್ರಗಳಿದ್ದು ಇವುಗಳಲ್ಲಿ 2020-23ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿ ಒಟ್ಟು 1,790 ಪ್ರಕರಣಗಳು ದಾಖಲಾಗಿವೆ.

    ಶೇ.95ರಷ್ಟು ಪ್ರಕರಣಗಳು ಸಮಾಲೋಚನೆಯಲ್ಲಿ ಪರಿಹಾರವಾಗಿದ್ದು ಶೇ.5ರಷ್ಟು ಪ್ರಕರಣಗಳಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಲಾಗಿದೆ. ಸಖೀ ವನ್‌ ಸ್ಟಾಪ್‌ ಸೆಂಟರ್‌ನಲ್ಲಿ ಮೂರು ವರ್ಷಗಳಲ್ಲಿ 837 ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 2022ರಲ್ಲಿ 76 ಮಹಿಳೆಯರು ನಾಪತ್ತೆಯಾಗಿದ್ದು 73 ಮಂದಿ ಪತ್ತೆಯಾಗಿದ್ದಾರೆ. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 74 ಮಹಿಳೆಯರು ನಾಪತ್ತೆಯಾಗಿದ್ದು 73 ಮಂದಿ ಪತ್ತೆಯಾಗಿದ್ದಾರೆ.

    ಎರಡು ವಸತಿಗೃಹ: 2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ ಮಹಿಳಾ ಉದ್ಯೋಗಿಗಳಿಗಾಗಿ ನಗರದ ಕೊಂಚಾಡಿ ಮತ್ತು ಕಂಕನಾಡಿಯಲ್ಲಿ ಎರಡು ವಸತಿಗೃಹ ಆರಂಭಿಸಲು ಈಗಾಗಲೇ ಕಟ್ಟಡ ಗುರುತಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಐದು ಮಹಿಳಾ ವಸತಿಗೃಹಗಳಿದ್ದು 450 ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಬೋವಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply