KARNATAKA
7 ಅಧಿಕಾರಿಗಳಿಂದ ಸಚಿವ ಚಲುವರಾಯಸ್ವಾಮಿ ವಿರುದ್ಧ ದೂರು: ಸಿಎಸ್‌ಗೆ ರಾಜಭವನ ಪತ್ರ
ಬೆಂಗಳೂರು, ಆಗಸ್ಟ್ 08: ‘ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಲಂಚ ನೀಡುವಂತೆ ತಮ್ಮನ್ನು ಒತ್ತಾಯಿಸಿದರು’ ಎಂದು ಆರೋಪಿಸಿ ಕೃಷಿ ಇಲಾಖೆ ಅಧಿಕಾರಿಗಳು ಬರೆದಿದ್ದಾರೆನ್ನಲಾದ ಪತ್ರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರಾಜಭವನ ಪತ್ರ ಬರೆದಿದೆ.
ಕೃಷಿ ಇಲಾಖೆಯಲ್ಲಿ ಎಲ್ಲ ಹಂತದ ಅಧಿಕಾರಿಗಳ ಹುದ್ದೆಗೆ ತಕ್ಕಂತೆ ದರ ನಿಗದಿ ಮಾಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಅದಾದ ಬಳಿಕ, ಯಾವ ಹುದ್ದೆಗೆ ಎಷ್ಟು ದರ ಎಂಬ ಪಟ್ಟಿಯೊಂದು ಬಿಡುಗಡೆಯಾಗಿತ್ತು. ಅದು ತಣ್ಣಗಾದ ಬೆನ್ನಲ್ಲೇ, ಮತ್ತೊಂದು ಪತ್ರ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ. ವರ್ಗಾವಣೆಯ ಗುಸುಗುಸು ಈಗ ರಾಜಭವನದ ಕದ ತಟ್ಟಿದೆ ಎನ್ನಲಾಗಿದ್ದು, ಖುದ್ದು ರಾಜಭವನವೇ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವುದು ಹೊಸ ಬೆಳವಣಿಗೆಯಾಗಿದೆ.
‘ಈ ಪತ್ರವೇ ನಕಲಿ ಹಾಗೂ ನನ್ನ ವಿರುದ್ಧ ನಡೆಸುತ್ತಿರುವ ಕುತಂತ್ರ’ ಎಂದು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
‘ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಯು ಸಚಿವ ಚಲುವರಾಯಸ್ವಾಮಿ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಅಧಿಕಾರಿಗಳು ಉಲ್ಲೇಖಿಸಿರುವಂತೆ ಅಧಿಕಾರಿ ಮತ್ತು ಸಿಬ್ಬಂದಿಯಿಂದ ₹6 ಲಕ್ಷದಿಂದ ₹8 ಲಕ್ಷದವರೆಗೆ ನೀಡುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆ.
ಲಂಚ ಕೇಳುವ ಇಂತಹ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕಲು ಕ್ರಮ ವಹಿಸದಿದ್ದರೆ ಅಧಿಕಾರಿಗಳು ಕುಟುಂಬದ ಸದಸ್ಯರ ಜತೆಗೆ ವಿಷ ಕುಡಿಯುವುದಾಗಿ ತಿಳಿಸಿದ್ದಾರೆ. ಈ ದೂರನ್ನು ನಿಯಮದ ಅನುಸಾರ ಪರಿಶೀಲಿಸಿ, ಸೂಕ್ತ ಕ್ರಮವಹಿಸಬೇಕು’ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸೂಚಿಸಿದ್ದಾರೆ.
ರಾಜಭವನದಿಂದ ಇದೇ 1ರಂದು ಮುಖ್ಯಕಾರ್ಯದರ್ಶಿಯವರಿಗೆ ಪತ್ರ ರವಾನೆಯಾಗಿದ್ದು, ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇದೇ 3ರಂದು ಪತ್ರವನ್ನು ಸ್ವೀಕರಿಸಿ, ಸಹಿ ಮಾಡಿದ್ದಾರೆ.
ರಾಜಭವನಕ್ಕೆ ಕೃಷಿ ಅಧಿಕಾರಿಗಳು ಪತ್ರ ಬರೆದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸಚಿವ ಚಲುವರಾಯಸ್ವಾಮಿ ಅವರು ಪತ್ರ ಬರೆದ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ‘ತಾವು ಅಂತಹ ಪತ್ರ ಬರೆದಿಲ್ಲ’ ಎಂದು ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಂಡಿದ್ದಾರೆ ಎಂಬ ಸುದ್ದಿಯೂ ಹರಡಿದೆ.
ಅಲ್ಲದೇ, ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆ ಪ್ರಯತ್ನದ ವಿಚಾರವಾಗಿ ಚಲುವರಾಯಸ್ವಾಮಿ ಮತ್ತು ಕುಮಾರಸ್ವಾಮಿ ಮಧ್ಯೆ ವಿಧಾನಸಭೆಯಲ್ಲಿ ಜಟಾಪಟಿ ನಡೆದಿತ್ತು. ಸಚಿವರ ಒತ್ತಾಸೆಯಿಂದಲೇ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.