LATEST NEWS
ಫ್ರಾನ್ಸ್ ನ ಚಾರ್ಲಿ ಹಾಬ್ಡೋ ಪತ್ರಿಕಾ ಕಛೇರಿ ಮೇಲೆ ಮತ್ತೆ ದಾಳಿ…..

ಫ್ರಾನ್ಸ್ ನ ಚಾರ್ಲಿ ಹಾಬ್ಡೋ ಪತ್ರಿಕಾ ಕಛೇರಿ ಮೇಲೆ ಮತ್ತೆ ದಾಳಿ…..
ಪ್ಯಾರೀಸ್, ಸೆಪ್ಟಂಬರ್ 25: ಮಹಮ್ಮದ್ ಪೈಗಂಬರ್ ಕುರಿತು ಕಾರ್ಟೂನ್ ಪ್ರಕಟಿಸಿ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಫ್ರಾನ್ಸ್ ನ ಚಾರ್ಲಿ ಹೆಬ್ಡೋ ಪತ್ರಿಕಾ ಕಛೇರಿ ಮೇಲೆ ಮತ್ತೆ ದಾಳಿಯಾಗಿದೆ.
ಐದು ವರ್ಷಗಳ ಹಿಂದೆ ಚಾರ್ಲಿ ಹೆಬ್ಡೋ ಪತ್ರಿಕೆ ತನ್ನ ಮುಖಪುಟದಲ್ಲಿ ಮಹಮ್ಮದ್ ಪೈಗಂಬರ್ ಕುರಿತು ಕಾರ್ಟೂನ್ ಒಂದನ್ನು ಪ್ರಕಟಿಸಿತ್ತು.

ಈ ಕಾರ್ಟೂನ್ ಗೆ ವಿರೋಧ ವ್ಯಕ್ತಪಡಿಸಿದ ಮುಸ್ಲಿ ಮೂಲಭೂತವಾದಿಗಳು ಪತ್ರಿಕಾ ಕಛೇರಿ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದರು.
ಬೆದರಿಕೆಯ ನಡುವೆಯೇ ಕಛೇರಿ ಮೇಲೆ ದಾಳಿ ಮಾಡಿದ ಮುಸ್ಲಿಂ ಮೂಲಭೂತವಾದ ಸಂಘಟನೆಗೆ ಸೇರಿದ ಉಗ್ರರು ಕಛೇರಿಯಲ್ಲಿದ್ದ 12 ಸಿಬ್ಬಂದಿಗಳನ್ನು ಗುಂಡಿಕ್ಕಿ ಕೊಂದಿದ್ದರು.
ಈ ಹಿನ್ನಲೆಯಲ್ಲಿ ಇತ್ತೀಚೆಗೆ ಈ ಕೃತ್ಯದಲ್ಲಿ ಭಾಗಿಯಾದ ಉಗ್ರರಿಗೆ ನೆರವು ಮಾಡಿದ್ದ ಹಲವರ ವಿಚಾರಣೆಯು ಇತ್ತೀಚೆಗಷ್ಟೇ ಆರಂಭಗೊಂಡಿತ್ತು.
ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡ ದಿನದಂದು ಪತ್ರಿಕೆಯ ಮುಖಪುಟದಲ್ಲಿ ಮತ್ತೆ ಅದೇ ಕಾರ್ಟೂನನ್ನು ಪ್ರಕಟಿಸಲಾಗಿತ್ತು.
ಪತ್ರಿಕೆಯ ಈ ನಿರ್ಧಾರಕ್ಕೆ ಮತ್ತೆ ಮುಸ್ಲಿಂ ಮೂಲಭೂತವಾದಿಗಳಿಂದ ಬೆದರಿಕೆಯು ಬರಲಾರಂಭಿಸಿತ್ತು.
ಈ ನಡುವೆ ಇಂದು ಪತ್ರಿಕಾ ಕಛೇರಿಗೆ ನುಗ್ಗಿದ ತಂಡ ಕಛೇರಿಯಲ್ಲಿದ್ದ ನಾಲ್ವರ ಮೇಲೆ ತಲವಾರು ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪೋಲೀಸರು ಇದೀಗ ಘಟನೆ ನಡೆದ ಸ್ಥಳದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ