LATEST NEWS
11ನೇ ವಯಸ್ಸಿಗೆ ದೈವದ ಕೋಲಕ್ಕೆ ಬಣ್ಣ ಹಚ್ಚಿದ ಬಾಲಕ

ಅಜೆಕಾರು: ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮ ಮುಗೇರಕಲ ಕ್ಷೇತ್ರದ ತನ್ನಿಮಾನಿಗ ನೇಮದಲ್ಲಿ 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿ ಗಮನ ಸೆಳೆದಿದ್ದಾನೆ.
ಶಿರ್ಲಾಲು ಸೂಡಿ ಶಾಲೆಯಲ್ಲಿ 6 ನೇ ತರಗತಿ ವಿದ್ಯಾರ್ಥಿಯಾದ ಸಮರ್ಥ್ ಹೆಸರಾಂತ ದೈವ ಕಲಾವಿದ ದಿ। ಮೋನು ಪಾಣಾರ ಶಿರ್ಲಾಲು ಇವರ ಮೊಮ್ಮಗನಾಗಿದ್ದು, ಅಜ್ಜ ಕಟ್ಟುತ್ತಿದ್ದ ಕೋಲವನ್ನು ನೋಡುತ್ತಾ ಬೆಳೆದಿದ್ದ.

ಶಿರ್ಲಾಲು ಸೂಡಿ ಪಂಗ್ಲಬೆಟ್ಟು, ಮುಂಡ್ಲಿ ಮುಗೇರಕಲ ದೈವಗಳ ಪ್ರತಿಷ್ಠಾ ವರ್ಧಾತ್ಯುತ್ಸವ ಶುಕ್ರವಾರ ಬೆಳಗ್ಗಿನ ಜಾವ ನಡೆದಿದ್ದು, ಈ ಸಂದರ್ಭದಲ್ಲಿ ತನಿಮಾನಿಗ ಹೆಣ್ಣು ದೈವದ ಪಾತ್ರಿಯಾಗಿ ಸಮರ್ಥ್ ಗಗ್ಗರ ಕಟ್ಟಿದ್ದಾನೆ. ಮೊಗೇರ ಸಮುದಾಯಕ್ಕೆ ಸೇರಿದ ಈ ದೈವಸ್ಥಾನದಲ್ಲಿ ವಾರ್ಷಿಕ ನೇಮ ನಡೆಯುತ್ತದೆ. ಮೋನು ಪಾಣರರ ವ್ಯಾಪ್ತಿಗೆ ಈ ದೈವಸ್ಥಾನ ಬರುತ್ತದೆ. ಹಿಂದೆ ಅಜ್ಜ ಮೋನು ಪಾಣರ ಕೋಲ ಕಟ್ಟುತಿದ್ದರು. ಅವರ ಮಗ ಹರೀಶ ಧರ್ಮರಸು ದೈವ ಕೋಲ ಕಟ್ಟುತ್ತಿದ್ದಾರೆ. ಹರೀಶ ಅವರ ಮಗ ಸಮರ್ಥ್ ಈಗ ಬಣ್ಣ ತುಂಬುತ್ತಿದ್ದು ಈ ಮೂಲಕ ಮೂರನೇ ತಲೆಮಾರಿನ ಬಾಲಕನೂ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿದ್ದಾನೆ.
ತನಿಮಾನಿಗ ದೈವದ ಕೋಲ ಕಟ್ಟುವವರು ಅವಿವಾಹಿತರಾಗಿರಬೇಕು. ಇದು ಬೆಳಗ್ಗಿನ ಜಾವ 2 ಗಂಟೆ ವೇಳೆಗೆ ನಡೆಯುವ ಕೋಲ. ಈ ಕೋಲದಲ್ಲಿ ಕರಿಮಣಿ ಕಟ್ಟುವ ವಿಶೇಷ ಪದ್ಧತಿ ಇದೆ. ಎಡೂರ ಮಾಯಗಾರ ತನಿಮಾನಿಗ ಸೇರಿದಂತೆ ಒಟ್ಟು ನಾಲ್ಕು ದೈವಗಳಿದ್ದು ನೇಮದ ಸಮಯದಲ್ಲಿ ತನಿಮಾನಿಗೆ ಹೆಣ್ಣು ದೈವಕ್ಕೆ ಮದುವೆ ಮಾಡಿಸುವ ರಿವಾಜು ಇದೆ.
ಹನ್ನೊಂದು ವರ್ಷದ ಬಾಲಕನೊಬ್ಬ ತನ್ನಿಮಾನಿಗ ದೈವದ ಗಗ್ಗರ ಕಟ್ಟಲು ಇರುವ ಕಟ್ಟುಪಾಡು, ಸಂಪ್ರದಾಯಗಳನ್ನು ಪಾಲಿಸಿ, ಯಶಸ್ವಿಯಾಗಿ ದೈವ ನರ್ತನ ಮಾಡಿರುವುದು ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಇದು ನಮ್ಮ ತುಳುನಾಡಿನ ಹೆಮ್ಮೆ ಮತ್ತು ಸಂಸ್ಕೃತಿ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಬಾಲಕನ ದೈವ ನರ್ತನ ಎಲ್ಲಡೆ ಸುದ್ದಿ ಮಾಡುತ್ತಿದೆ.
1 Comment