Connect with us

FILM

ಡ್ರಗ್ಸ್ ವಾಟ್ಸಪ್ ಗ್ರೂಪ್‍ಗೆ ದೀಪಿಕಾ ಅಡ್ಮಿನ್ – ಎನ್‍ಸಿಬಿ ಮಾಹಿತಿ ರಿವೀಲ್

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ರಕುಲ್‍ಪ್ರೀತ್ ಸಿಂಗ್ ಹಾಗೂ ಸಾರಾ ಅಲಿ ಖಾನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದ್ದು, ಡ್ರಗ್ಸ್ ಕುರಿತು ಚಾಟ್ ಮಾಡುತ್ತಿದ್ದ ವಾಟ್ಸಪ್ ಗ್ರೂಪ್‍ಗೆ ದೀಪಾಕಾ ಪಡುಕೋಣೆ ಅಡ್ಮಿನ್ ಆಗಿದ್ದರು ಎಂದು ಸ್ವತಃ ಎನ್‍ಸಿಬಿ ಮೂಲಗಳು ತಿಳಿಸಿವೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವಾಗಲೇ ಡ್ರಗ್ಸ್ ದಂಧೆ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದ್ದು, ಸುಶಾಂತ್ ಸಿಂಗ್ ರಜಪೂತ್ ಪ್ರಿಯತಮೆ, ನಟಿ ರಿಯಾ ಚಕ್ರವರ್ತಿ ಹಾಗೂ ಇತರ ಡ್ರಗ್ ಪೆಡ್ಲರ್‍ಗಳನ್ನು ವಿಚಾರಣೆ ನಡೆಸುತ್ತಿದ್ದಾಗ ಬಾಲಿವುಡ್‍ನ ಹಲವು ನಟ, ನಟಿಯರು ಹಾಗೂ ನಿರ್ಮಾಪಕರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‍ಸಿಬಿ ಈಗಾಗಲೇ ಹತ್ತಾರು ನಟಿಯರನ್ನು ವಿಚಾರಣೆ ನಡೆಸಿದೆ.

ಈ ಹಿಂದೆ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಗೆ ನೋಟಿಸ್ ನೀಡಿತ್ತು. ನಂತರ ಸ್ವತಃ ದೀಪಿಕಾ ಪಡುಕೋಣೆಯವರಿಗೇ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಈ ವೇಳೆ ವಾಟ್ಸಪ್ ಕುರಿತು ಮಹತ್ವದ ಮಾಹಿತಿ ಹೊರ ಬಿದ್ದಿದ್ದು, ಡ್ರಗ್ಸ್ ಕುರಿತ ಮೂವರಿದ್ದ ಗ್ರೂಪ್‍ಗೆ ದೀಪಿಕಾ ಪಡುಕೋಣೆಯವರೇ ಅಡ್ಮಿನ್ ಆಗಿದ್ದರು ಎಂದು ತಿಳಿದು ಬಂದಿದೆ. ಈ ವಾಟ್ಸಪ್ ಗ್ರೂಪ್‍ನಲ್ಲಿ ನಟಿಯ ಮ್ಯಾನೇಜರ್ ಕರಿಷ್ಮಾ ಪ್ರಕಾಶ್, ಜಯಾ ಸಾಹ ಅವರೂ ಭಾಗಿಯಾಗಿದ್ದಾರೆ. ಈ ಕುರಿತು ಎನ್‍ಸಿಬಿ ಈಗಾಗಲೇ ಕರಿಷ್ಮಾ ಅವರ ವಿಚಾರಣೆ ನಡೆಸಿದೆ. ದೀಪಿಕಾ ಅವರು ಶನಿವಾರ ವಿಚಾರಣೆಗೆ ಹಾಜರಾಗಲಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯವರೊಂದಿಗೆ ಡ್ರಗ್ಸ್ ಕುರಿತು ಮಾತನಾಡಿರುವುದಾಗಿ ರಕುಲ್ ಪ್ರೀತ್ ಸಿಂಗ್ ಒಪ್ಪಿಕೊಂಡಿದ್ದಾರೆ. ನನ್ನೊಂದಿಗೆ ಡ್ರಗ್ಸ್ ಇಟ್ಟುಕೊಂಡಿರುತ್ತಿದ್ದೆ ಆದರೆ ಸೇವಿಸಿಲ್ಲ, ಇದನ್ನು ರಿಯಾಗಾಗಿ ಇಟ್ಟುಕೊಂಡಿರುತ್ತಿದ್ದೆ ಎಂದು ಹೇಳಿದ್ದಾರೆ. ರಕುಲ್ ಅವರನ್ನು ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಒಳಪಡಿಸಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾಗಿರುವ ರಿಯಾ ಚಕ್ರವರ್ತಿ ಹೇಳಿಕೆಯನ್ನಾಧರಿಸಿ ಎನ್‍ಸಿಬಿ ಸಮನ್ಸ್ ನೀಡಿದೆ ಎನ್ನಲಾಗಿದೆ. ರಿಯಾ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುತ್ತಿದ್ದ ಸುಮಾರು 25 ತಾರೆಯರ ಹೆಸರು ಹೇಳಿದ್ದಾರೆ ಎಂದು ವರದಿಯಾಗಿದೆ. ಡ್ರಗ್ಸ್ ಖರೀದಿಗಾಗಿ ಎರಡು ದಿನಗಳ ಹಿಂದೆ ದೀಪಿಕಾ ಮತ್ತು ಶ್ರದ್ಧಾ ಕಪೂರ್ ವಾಟ್ಸಪ್ ಚಾಟ್ ಮಾಹಿತಿಯನ್ನು ಖಾಸಗಿ ವಾಹಿನಿ ಬಿತ್ತರಿಸಿತ್ತು. ಇತ್ತ ರಕುಲ್ ಪ್ರೀತ್ ಸಿಂಗ್ ಮಾಧ್ಯಮಗಳಿಂದ ತಮ್ಮ ತೇಜೋವಧೆ ಆಗುತ್ತಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಮ್ಯಾನೇಜರ್ ಕರಿಷ್ಮಾ ಬಳಿ ಮಾಲ್ ಇದೆಯಾ ಎಂದು ದೀಪಿಕಾ ಕೇಳಿರುವ ವಾಟ್ಸಪ್ ಚಾಟ್‍ನ ಸ್ಕ್ರೀನ್‍ಶಾಟ್ ಇತ್ತೀಚೆಗೆ ರಿವೀಲ್ ಆಗಿತ್ತು. ಹ್ಯಾಶ್ ಕೇಳಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿತ್ತು.