Connect with us

LATEST NEWS

ಕೇವಲ ಒಂದು ಪ್ರದೇಶ ಅಥವಾ ಗುಂಪಿನ ಮೇಲೆ ನಡೆದ ದಾಳಿಯಲ್ಲ; ಬದಲಿಗೆ ಪ್ರತಿ ಭಾರತೀಯರ ಮನೆಯ ಮೇಲೆ ನಡೆದಿರುವ ದಾಳಿ – ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು ಎಪ್ರಿಲ್ 23: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಹೇಡಿತನದ ಭಯೋತ್ಪಾದಕ ದಾಳಿಯು ನನ್ನ ಮನಸ್ಸಿಗೆ ತೀವ್ರ ನೋವು ನೀಡುವ ಜತೆಗೆ ಬಹಳ ಆಕ್ರೋಶವನ್ನುಂಟು ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಹೇಳಿದ್ದಾರೆ.


ಉಗ್ರರು ಮುಗ್ಧ ಜನರ ಮೇಲೆ ನಡೆಸಿರುವ ಈ ದಾಳಿಯನ್ನು ಕಟುವಾಗಿ ಖಂಡಿಸಿರುವ ಕ್ಯಾ. ಚೌಟ ಅವರು, ಈ ದಾಳಿಯಲ್ಲಿ ಶಿವಮೊಗ್ಗ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ಹಲವೆಡೆಯಿಂದ ಕಾಶ್ಮೀರಕ್ಕೆ ಬಂದಿದ್ದ ಕುಟುಂಬಗಳು ತಮ್ಮ ಪ್ರೀತಿ-ಪಾತ್ರರನ್ನು ಕಳೆದುಕೊಂಡಿರುವುದು ಹೃದಯ ಮಿಡಿಯುವಂತೆ ಮಾಡಿದೆ. ಇದು ಕೇವಲ ಒಂದು ಪ್ರದೇಶ ಅಥವಾ ಗುಂಪಿನ ಮೇಲೆ ನಡೆದ ದಾಳಿಯಲ್ಲ; ಬದಲಿಗೆ ಇದು ಪ್ರತಿ ಭಾರತೀಯರ ಮನೆಯ ಮೇಲೆ ನಡೆದಿರುವ ದಾಳಿಯಾಗಿದೆ ಎಂದು ಅತೀವ ಮರುಕ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರವು ಶಾರದಾ ದೇಶ, ಅದು ಅನಾದಿ ಕಾಲದ ದೇವಾಲಯಗಳನ್ನು ಮಡಿಲಲ್ಲಿ ಹೊತ್ತುಕೊಂಡ ಪವಿತ್ರ ಜ್ಞಾನದ ಭೂಮಿ. ಅಷ್ಟೇಅಲ್ಲ ಅದು ನಮ್ಮ ಭಾರತದ ಮುಕುಟ ಮಣಿ ಎಂಬುವುದನ್ನು ಬಹಳ ಸ್ಪಷ್ಟ ಹಾಗೂ ಗಟ್ಟಿ ಧ್ವನಿಯಿಂದ ಹೇಳಬೇಕು. ಆದರೆ ಈ ಸತ್ಯವು ಶತ್ರುಗಳನ್ನು ಕಂಗೆಡಿಸುತ್ತಿದೆ. ಹೀಗಾಗಿ, ಈ ಹೇಡಿ ಭಯೋತ್ಪಾದಕರು ನಿರಾಯುಧ ನಾಗರಿಕರನ್ನು ಕೊಂದು ಭಯ ಹುಟ್ಟಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಉಗ್ರರು ಹಾಗೂ ಅವರ ಹಿಂದಿನ ದುಷ್ಟರಿಗೆ ಮುಖ್ಯ ಆಯುಧ ಬಂದೂಕುಗಳಲ್ಲ; ಬದಲಿಗೆ ಜನರಲ್ಲಿ ಭಯ ಹುಟ್ಟಿಸುವುದೇ ಅವರ ಗುರಿ. ಕಾಶ್ಮೀರದ ಬೀದಿಗಳು ಬಿಕೋ ಎನ್ನಬೇಕು, ಅಲ್ಲಿ ವ್ಯಾಪಾರ ವಹಿವಾಟು- ಆರ್ಥಿಕತೆ ಹಾಳಾಗಬೇಕು, ಜನರು ನಿರಾಶರಾಗಬೇಕು ಎಂಬುವುದೇ ಅವರ ಮುಖ್ಯ ಉದ್ದೇಶ. ಭಾರತ ವಿರೋಧಿ ಶಕ್ತಿಗಳು ದೇಶದ ಒಳಗೆ ಮತ್ತು ಹೊರಗಿದ್ದುಕೊಂಡು ಒಂದು ಪ್ರದೇಶದಲ್ಲಿ ಅಭಾವವನ್ನು ಸೃಷ್ಟಿಸಿ, ಆರ್ಥಿಕತೆಯನ್ನು ಹಾಳುಗೆಡವಿ, ಜನರಲ್ಲಿ ಹತಾಶೆಯನ್ನು ತುಂಬುತ್ತಾರೆ ಆ ನಿರ್ಜನತೆ ಮತ್ತು ಹತಾಶೆಯ ವಾತಾವರಣವನ್ನು ಬಳಸಿಕೊಂಡು ಇಡೀ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಅವರ ಕಾರ್ಯತಂತ್ರ ಹಾಗೂ ಒಳಸಂಚಿನ ಒಂದು ಮುಖ್ಯ ಭಾಗವಾಗಿದೆ ಎಂದು ಕ್ಯಾ.ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಭಾರತ ಬದಲಾಗಿದ್ದು, ಜಗತ್ತು ಕೂಡ ಬದಲಾಗಿದೆ. ಇಂದು, ವಾಷಿಂಗ್ಟನ್‌ನಿಂದ ಪಶ್ಚಿಮ ಏಷ್ಯಾದವರೆಗೆ, ಜಾಗತಿಕ ಸಮುದಾಯವು ಭಾರತದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಪ್ರಪಂಚದಾದ್ಯಂತದ ಬಲಿಷ್ಠ ರಾಷ್ಟ್ರಗಳು ಈ ಭಯೋತ್ಪಾದಕ ಕೃತ್ಯವನ್ನು ಸ್ಪಷ್ಟವಾಗಿ ಖಂಡಿಸಿ ಭಾರತಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ. ಆಧುನಿಕ ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ. ಭಾರತದಲ್ಲೂ ಇದಕ್ಕೆ ಕಿಂಚಿತ್ತೂ ಅವಕಾಶವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ವಿರೋಧಿ ಶಕ್ತಿಗಳಿಗೆ ನೋವುಂಟು ಮಾಡುತ್ತಿರುವುದೇನು?

ಮೋಸ್ಟ್‌ವಾಂಟೆಡ್‌ ಉಗ್ರ ತಹವ್ವೂರ್‌ ರಾಣಾ ಭಾರತದಲ್ಲಿ ಕಾನೂನಿನಡಿ ಕ್ರಮ ಎದುರಿಸಿಬೇಕಾಗಿರುವುದು, ದಶಕಗಳ ಕಾಲದ ಅನಿಯಂತ್ರಿತ ದುರ್ಬಳಕೆಯನ್ನು ಕೊನೆಗೊಳಿಸುವ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿರುವುದು, ಕಾಶ್ಮೀರದಲ್ಲಿ ಜನರನ್ನು ಭಯದ ವಾತಾವರಣದಲ್ಲಿಡುವ ೩೭೦ನೇ ವಿಧಿಯನ್ನು ರದ್ದುಗೊಳಿಸಿರುವುದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಹೆಮ್ಮೆಯ ನವ ಭಾರತದ ಉದಯ ಮತ್ತು ಹಿಂಸೆಯನ್ನು ಸೃಷ್ಟಿಸುವ ಹೇಡಿಗಳಿಗೆ ದೊರಕುತ್ತಿರುವ ಮರೆಯಲಾಗ ತಕ್ಕ ಉತ್ತರ; ಆದರೆ, ಇಂಥಹ ದಾಳಿಯನ್ನು ಎಂದಿಗೂ ಕ್ಷಮಿಸಲಾಗದು ಮತ್ತು ಮರೆಯಲಾಗದು. ಇದಕ್ಕೆ ಪ್ರತಿಕಾರವನ್ನು ತೀರಿಸಲೇಬೇಕು ಎಂದು ಕ್ಯಾ. ಚೌಟ ಕಿಡಿಕಾರಿದ್ದಾರೆ.

ಈ ಹಿಂದೆ ದೇಶ ಸೇವೆಗೈದ ಓರ್ವ ಯೋಧನಾಗಿ ಹಾಗೂ ಇಂದು ನಿಮ್ಮ ಜನಪ್ರತಿನಿಧಿಯಾಗಿ ನಾನು ಹೇಳುವುದೇನೆಂದರೆ-ಪ್ರತಿಯೊಬ್ಬ ಭಾರತೀಯನೂ ಮಾನಸಿಕವಾಗಿ ಸೈನಿಕನಾಗಬೇಕಾದ ಸಮಯವಿದು. ನಮ್ಮ ದೇಶದ ಪ್ರತಿಯೊಂದು ಮನೆಯಿಂದಲೂ ಒಗ್ಗಟ್ಟಿನ ಶಕ್ತಿ ಹೊರಹೊಮ್ಮಲಿ. ಏಕೆಂದರೆ ಈ ಹೋರಾಟ ಕೇವಲ ಕಾಶ್ಮೀರಕ್ಕೆ ಸೀಮಿತವಾಗಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದವರ ವಿಕೃತ ಮನಸ್ಥಿತಿಗಳು, ವಕ್ಫ್ ಸುಧಾರಣೆಯನ್ನು ವಿರೋಧಿಸಿದ ಅದೇ ಗುಂಪು ಈ ಕೃತ್ಯಗಳ ಹಿಂದೆಯೂ ಇದೆ. ನಮ್ಮ ಬಲಿಷ್ಠ, ಸ್ವತಂತ್ರ ಮತ್ತು ಸಂಸ್ಕೃತಿಯನ್ನು ಗೌರವಿಸುವ ಭಾರತವನ್ನು ಕಂಡು ಭಯಪಡುವ ಶಕ್ತಿಗಳೇ ಇವೆಲ್ಲವನ್ನೂ ಮಾಡುತ್ತಿವೆ ಎಂದು ನೇರ ಆರೋಪ ಮಾಡಿದ್ದಾರೆ.

ಪಹಲ್ಗಾಮ್‌ನಲ್ಲಿ ಹತ್ಯೆಯಾದ ಶಿವಮೊಗ್ಗದ ಮಂಜುನಾಥ್ ಇರಬಹುದು, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಜೀವನವನ್ನು ಆರಂಭಿಸುತ್ತಿದ್ದ ನವ ದಂಪತಿಗಳಿರಬಹುದು ಮತ್ತು ರಜೆಯ ಖುಷಿ ಅನುಭವಿಸಬೇಕಾದ ಮುದ್ದು ಮಗು ಇರಬಹುದು; ಅವರೆಲ್ಲರೂ ನಮ್ಮಂತೆಯೇ ಇದ್ದರು. ಅವರಿಗೂ ಕನಸುಗಳಿದ್ದವು, ಭವಿಷ್ಯವಿತ್ತು. ಈ ದಾಳಿ ಕೇವಲ ಒಂದು ಪ್ರದೇಶಕ್ಕೆ ಆದ ಗಾಯವಲ್ಲ, ಇದು ಇಡೀ ದೇಶಕ್ಕೆ ಆದ ನೋವು. ಈ ದುರಂತ ನಮ್ಮೆಲ್ಲರ ಹೃದಯವನ್ನು ತಟ್ಟಿದೆ. ಭಾರತವು ಈ ನೋವಿಗೆ ಒಗ್ಗಟ್ಟಿನಿಂದ, ತನ್ನೆಲ್ಲಾ ಶಕ್ತಿಯಿಂದ ಮತ್ತು ದೃಢವಾದ ನಿರ್ಧಾರದಿಂದ ಉತ್ತರಿಸುತ್ತದೆ. ನಾವು ಈ ದಾಳಿಯನ್ನು ಎಂದಿಗೂ ಮರೆಯುವುದಿಲ್ಲ ಮತ್ತು ನಮ್ಮೆಲ್ಲರ ಏಕತೆಯೇ ಇದಕ್ಕೆ ಪ್ರಬಲವಾದ ಉತ್ತರವಾಗಲಿದೆ ಎಂದು ಕ್ಯಾ. ಚೌಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *