KARNATAKA
ಜಗದೀಶ್ ಶೆಟ್ಟರ್ ಗೆಲ್ಲಲು ಸಾದ್ಯವಿಲ್ಲ – ರಕ್ತದಲ್ಲಿ ಬರೆದುಕೊಡುತ್ತೇನೆ ಎಂದ ಬಿಎಸ್ ವೈ

ಹುಬ್ಬಳ್ಳಿ ಎಪ್ರಿಲ್ 26 : ಬಿಜೆಪಿಯಿಂದ ಬಂಡಾಯ ಎದ್ದು ಕಾಂಗ್ರೇಸ್ ಸೇರಿದ್ದ ಜಗದೀಶ್ ಶೆಟ್ಟರ್ ವಿರುದ್ದ ಇದೀಗ ಬಿಎಸ್ ವೈ ಕೆಂಡಾ ಮಂಡಲವಾಗಿದ್ದು, ‘ಹು–ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ದಯನೀಯ ಸೋಲು ಅನುಭವಿಸಬೇಕು. ಅವರಿಗೆ ಮತದಾರರು ಪಾಠ ಕಲಿಸಬೇಕು. ಯಾವುದೇ ಕಾರಣಕ್ಕೂ ಅವರು ಗೆಲ್ಲಲು ಸಾಧ್ಯವಿಲ್ಲ. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ’ ಎಂದು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಸವಾಲು ಹಾಕಿದರು.
ನಗರದ ಗೋಕುಲ ರಸ್ತೆಯ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಧಾರವಾಡ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು. ಜಗದೀಶ ಶೆಟ್ಟರ್ ಬಗ್ಗೆ ವೀರಶೈವ ಲಿಂಗಾಯತರಿಗೆ ವಾಸ್ತವ ಸಂಗತಿ ತಿಳಿಸಲೆಂದು ಈ ಸಭೆ ಕರೆಯಲಾಗಿದೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ವಿಧಾನಸಭೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಬಿ.ಬಿ. ಶಿವಪ್ಪ ಅವರು ವಿರೋಧ ಪಕ್ಷದ ನಾಯಕರಾಗಲು ಹಟ ಹಿಡಿದಾಗ ನಾವು ಶೆಟ್ಟರ್ ಪರವಾಗಿ ನಿಂತಿದ್ದೆವು. ಇದೆಲ್ಲ ಮರೆತಿದ್ದಾರೆ’ ಎಂದರು.

‘ಕೆಲವು ಕಾರಣಕ್ಕೆ ನಿಮ್ಮನ್ನ ಅಭ್ಯರ್ಥಿಯಾಗಿ ಮಾಡಲಾಗಲಿಲ್ಲ. ಕೇಂದ್ರದಲ್ಲಿ ಉನ್ನತ ಸ್ಥಾನ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹೇಳಿದರೂ ಕೇಳಲಿಲ್ಲ. ಅವರಿಗೆ ನಾವೇನು ಅನ್ಯಾಯ ಮಾಡಿದ್ದೇವೆ? ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿದ್ದಾರೆ. ಈ ಚುನಾವಣೆಯಲ್ಲಿ ಶೆಟ್ಟರ್ ಪರ ನಿಲ್ಲದೆ, ಮಹೇಶ ಅವರನ್ನು ಭಾರಿ ಅಂತರದಲ್ಲಿ ಗೆಲ್ಲಿಸಿ’ ಎಂದು ಮನವಿ ಮಾಡಿದರು. ‘ಇವತ್ತಿನಿಂದ ಶೆಟ್ಟರ್ ಹೆಸರು ಹೇಳಲು ಇಷ್ಟ ಪಡುವುದಿಲ್ಲ. ಅವರು ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ. ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ. ಪಕ್ಷಕ್ಕೆ ದ್ರೋಹ ಬಗೆಯುವವರನ್ನು ಜನ ಸುಮ್ಮನೆ ಬಿಡಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.