KARNATAKA
ಬೆಂಗಳೂರಲ್ಲಿ ಹಣಕ್ಕಾಗಿ ಒಂಟಿ ಗೃಹಿಣಿ ಕೊಲೆ, ಉತ್ತರಪ್ರದೇಶದಲ್ಲಿ ಆರೋಪಿ ಸೆರೆ..!

ಬೆಂಗಳೂರು: ಸಿಲಿಕಾನ್ ಸಿಟಿಯ ಬೆಟ್ಟದಾಸಪುರದ ಪ್ರಭಾಕರ್‌ರೆಡ್ಡಿ ಲೇಔಟ್‌ನಲ್ಲಿ ಮನೆಗೆ ನುಗ್ಗಿ ಗೃಹಿಣಿ ನೀಲಂನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ರಜನೀಶ್ ಕುಮಾರ್(28) ಬಂಧಿತ ಆರೋಪಿಯಾಗಿದ್ದಾನೆ. ಜ.4ರಂದು ನೀಲಂ ಅವರು ಮನೆಯಲ್ಲಿ ಒಂಟಿಯಾಗಿದ್ದಾಗ ಮನೆಗೆ ನುಗ್ಗಿದ ಆರೋಪಿ, ಕುತ್ತಿಗೆ ಬಿಗಿದು ಕೊಲೆ ಮಾಡಿ ಮನೆಯಲ್ಲಿದ್ದ ₹8 ಸಾವಿರ ನಗದು, ಕಿವಿಯೊಲೆ ದೋಚಿ ಪರಾರಿಯಾಗಿದ್ದ. ಸಂಜೆ ನೀಲಂ ಮಗ ಶಾಲೆಯಿಂದ ಮನೆಗೆ ಬಂದಾಗ ಕೊಲೆ ಕೃತ್ಯ ಗೊತ್ತಾಗಿತ್ತು. ‘ಉತ್ತರಪ್ರದೇಶದ ಅಮರ ಗ್ರಾಮದ ಆರೋಪಿ ರಜನೀಶ್ ಕುಮಾರ್, ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಪೇಟಿಂಗ್ ಕೆಲಸ ಮಾಡುತ್ತಿದ್ದ. ಎಲೆಕ್ಟ್ರಾನಿಕ್ ಸಿಟಿ ಲೇಔಟ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಇದೇ ವೇಳೆ ಎರಡು ವರ್ಷಗಳಿಂದ ಪ್ರಭಾಕರ್ ರೆಡ್ಡಿ ಲೇಔಟ್‌ನಲ್ಲಿ ವಾಸವಾಗಿದ್ದ ನೀಲಂ ಅವರ ಪತಿ ಉತ್ತರ ಪ್ರದೇಶದ ಪ್ರದ್ಯುಮ್ನ ಅವರ ಪರಿಚಯವಾಗಿತ್ತು. ಪ್ರದ್ಯುಮ್ನ ಅವರು ಹಾರ್ಡ್‌ವೇರ್ ಅಂಗಡಿ ಹೊಂದಿದ್ದರು. ಪ್ರದ್ಯುಮ್ನರೊಂದಿಗೂ ಸ್ನೇಹ ಸಂಪಾದಿಸಿ, ಅವರ ಕುಟುಂಬಕ್ಕೂ ಹತ್ತಿರವಾಗಿದ್ದ. ಹಾರ್ಡ್‌ವೇರ್ ಶಾಪ್ ಅನ್ನು ಕೊಲೆಯಾದ ನೀಲಂ ಸಹೋದರ ಪಂಕಜ್ ನೋಡಿಕೊಳ್ಳುತ್ತಿದ್ದರು. ಇವರು ಪೇಟಿಂಗ್ ಬಾಕ್ಸ್‌ಗಳನ್ನು ಡೆಲಿವರಿಗೆ ಹೋಗುತ್ತಿದ್ದ ವೇಳೆ ರಜನೀಶ್ ಕುಮಾರ್ ಹಾರ್ಡ್‌ವೇರ್ ನೋಡಿಕೊಳ್ಳುತ್ತಿದ್ದ. ಪೇಟಿಂಗ್ ಅಂಗಡಿಯ ವ್ಯವಹಾರವನ್ನು ಗಮನಿಸಿದ್ದ. ಪಂಕಜ್ ಮನೆಯಲ್ಲೂ ಬಾರಿ ಹಣ ಇರಬಹುದೆಂದು ಭಾವಿಸಿ ಮನೆಯಲ್ಲಿ ದರೋಡೆಗೆ ನಿರ್ಧರಿಸಿದ್ದ’ ಎಂದು ಪೊಲೀಸರು ಹೇಳಿದರು. ಮನೆಗೆ ಬಂದಿದ್ದ ರಜನೀಶ್ ಪರಿಚಯವಿದ್ದ ಕಾರಣಕ್ಕೆ ನೀಲಂ ಅವರೇ ಮನೆಯ ಒಳಕ್ಕೆ ಕರೆದಿದ್ದರು. ಊಟ ಮಾಡುವಂತೆಯೂ ಕೇಳಿದ್ದರು. ಊಟ ಮಾಡುವುದಾಗಿ ಹೇಳಿದಾಗ ನೀಲಂ ಅಡುಗೆ ಕೋಣೆಗೆ ತೆರಳಿದ್ದರು. ಆಗ ಹಿಂದಿನಿಂದ ಹೋಗಿ ಟವೆಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಮನೆಯಲ್ಲಿದ್ದ ₹8 ಸಾವಿರ ದೋಚಿದ್ದ. ಆರೋಪಿ ನಿರೀಕ್ಷಿಸಿದಷ್ಟು ಹಣ ಸಿಗದಿದ್ದಾಗ ಮೃತದೇಹದ ಮೈಮೇಲಿದ್ದ ಕಿವಿಯೊಳೆ ದೋಚಿ ಪರಾರಿಯಾಗಿದ್ದ. ‘ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಸಿಸಿ ಟಿವಿ ಕ್ಯಾಮೆರಾದಲ್ಲಿನ 850 ದೃಶ್ಯಗಳನ್ನು ಪರಿಶೀಲಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಬಟ್ಟೆ ಬದಲಾಯಿಸಿರುವುದು ಪತ್ತೆಯಾಗಿತ್ತು. ಬಳಿಕ ಆರೋಪಿಯ ಮುಖ ಚಹರೆ ಆಧರಿಸಿ ಬಂಧಿಸಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
