ಪುತ್ತೂರು: ನಾದಿನಿ ಮುಖಕ್ಕೆ ಆ್ಯಸಿಡ್ ಎರಚಿದ ಬಾವ

ಪುತ್ತೂರು ಜನವರಿ 24: ನಾದಿನಿಯ ಮುಖಕ್ಕೆ ಬಾವನೇ ಆ್ಯಸಿಡ್ ಎರಚಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೋಡಿಂಬಾಳ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಕಡಬ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಆ್ಯಸಿಡ್ ಎರಚಿದ ಆರೋಪಿಯನ್ನು ಕೊಂಡಿಂಬಾಳ ಗ್ರಾಮದ ಕೊಠಾರಿ ನಿವಾಸಿ ಜಯಾನಂದ ಕೊಠಾರಿ(55) ಎಂದು ಗುರುತಿಸಲಾಗಿದೆ. ಇವರ ವೃತ್ತಿಯಲ್ಲಿ ಎಲ್‍ಐಸಿ ಏಜೆಂಟ್ ಆಗಿದ್ದಾನೆ. ಈತ ತನ್ನ ತಮ್ಮನ ಪತ್ನಿ ವಿಧವೆ ಮಹಿಳೆ ಸ್ವಪ್ನಾ(35) ಎಂಬವರ ಮುಖಕ್ಕೆ ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಎಸೆದಿದ್ದಾರೆ.

ಈ ಸಂದರ್ಭದಲ್ಲಿ ಮಹಿಳೆಯ ಹತ್ತಿರವಿದ್ದ ತನ್ನ ಹೆಣ್ಣು ಮಗಳಿಗೂ ಆ್ಯಸಿಡ್ ತಾಗಿದ್ದು, ತಾಯಿ ಹಾಗೂ ಮಗಳು ಇಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಪ್ನಾ ಅವರ ಪತಿ ರವಿ ಅವರು ಈಗಾಗಲೇ ಮೃತಪಟ್ಟಿದ್ದು , ಪ್ರತ್ಯೇಕವಾಗಿ ತನ್ನ ಮೂರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಜಯಾನಂದ ಹಾಗೂ ಸ್ವಪ್ನಾ ಅವರ ಮಧ್ಯೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಿದ್ದು, ಅದು ಭೂವಿವಾದಕ್ಕೆ ತಿರುಗಿ ಇವರ ಮಧ್ಯೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆರೋಪಿಯನ್ನು ಕಡಬ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Facebook Comments

comments