LATEST NEWS
ನಾನ್ವೆಜ್ ಪಿಜ್ಜಾ ನೀಡಿದ ರೆಸ್ಟೋರೆಂಟ್ ನಿಂದ 1 ಕೋಟಿ ಪರಿಹಾರ ಕೇಳಿದ ಮಹಿಳೆ
ಘಜಿಯಾಬಾದ್, ಮಾರ್ಚ್ 17: ಸಸ್ಯಾಹಾರದ ಬದಲು ಮಾಂಸಾಹಾರಿ ಪಿಜ್ಜಾ ವಿತರಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ನ್ಯಾಯಾಲಯ ಮೆಟ್ಟಿಲೇರಿದ್ದಾರೆ. 2019ರ ಮಾರ್ಚ್ 21 ರಂದು ಈ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್ನಲ್ಲಿ ನಡೆದಿದ್ದು, ದೀಪಾಲಿ ಎಂಬ ಮಹಿಳೆ 1 ಕೋಟಿ ರೂ. ಪರಿಹಾರ ಕೋರಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ.ತನ್ನ ನಿವಾಸಕ್ಕೆ ಪಿಜ್ಜಾ ರೆಸ್ಟೋರೆಂಟ್ ನಿಂದ ಸಸ್ಯಾಹಾರಿ ಪಿಜ್ಜಾಕ್ಕಾಗಿ ಮಹಿಳೆ ಆರ್ಡರ್ ಮಾಡಿದ್ದರು. ಮನೆಗೆ ರೆಸ್ಟೋರೆಂಟ್ ನಿಂದ ಬಂದ ಪಿಜ್ಜಾವನ್ನು ನೋಡಿದ ದೀಪಾಲಿಗೆ ಅಚ್ಚರಿ ಕಾದಿತ್ತು. ಏಕೆಂದರೆ ರೆಸ್ಟೋರೆಂಟ್ನಿಂದ ತಪ್ಪಾಗಿ ಮಾಂಸಾಹಾರಿ ಪಿಜ್ಜಾ ನೀಡಲಾಗಿತ್ತು. ಇದರಿಂದ ಕೋಪಗೊಂಡ ಮಹಿಳೆಯು ಗ್ರಾಹಕ ನ್ಯಾಯಾಲಯಕ್ಕೆ ಪಿಜ್ಜಾ ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾಳೆ.
“ಪಿಜ್ಜಾ ಆರ್ಡರ್ ಮಾಡಿದ್ದ ದಿನದಂದು ಹೋಳಿ ಹಬ್ಬ ಆಚರಿಸಿದ್ದೆವು. ಹೋಳಿ ಹಬ್ಬ ಆಚರಣೆ ಮಾಡಿದ ನಂತರ ನಮ್ಮ ಕುಟುಂಬದ ಸದಸ್ಯರೆಲ್ಲರಿಗೂ ತುಂಬ ಹಸಿವಾಗಿದ್ದ ಕಾರಣ ಸಸ್ಯಾಹಾರಿ ಪಿಜ್ಜಾ ಆರ್ಡರ್ ಮಾಡಿದ್ದೆ. ಪಿಜ್ಜಾ ನಿಗದಿತ ಸಮಯಕ್ಕೆ ಬಾರದೆ 30 ನಿಮಿಷ ತಡವಾಗಿ ಡೆಲಿವರಿ ಮಾಡಿದ್ದಲ್ಲದೆ, ಸಸ್ಯಾಹಾರಿಯ ಬದಲು ಮಾಂಸಾಹಾರಿ ಪಿಜ್ಜಾ ನೀಡಿದ್ದಾರೆ ಎಂದು ಸೇವಿಸಿದ ನಂತರ ತಿಳಿಯಿತು. ಅಣಬೆ ಬದಲು ಅದರಲ್ಲಿ ಮಾಂಸದ ತುಂಡುಗಳನ್ನು ಪಿಜ್ಜಾದಲ್ಲಿ ಬಳಸಿದ್ದಾರೆ” ಎಂದು ದೀಪಾಲಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ತಮಗೆ ನೀಡಿರುವುದು ಮಾಂಸಾಹಾರಿ ಪಿಜ್ಜಾ ಎಂದು ತಿಳಿದ ತಕ್ಷಣ ಗ್ರಾಹಕರ ನ್ಯಾಯಾಲಯಕ್ಕೆ ಕರೆ ಮಾಡಿ ದೀಪಾಲಿ ದೂರು ನೀಡಿದ್ದರು. ನಂತರ ಪಿಜ್ಜಾ ರೆಸ್ಟೋರೆಂಟ್ನ ಆಫೀಸರ್ ದೀಪಾಲಿಗೆ ಕರೆ ಮಾಡಿ, ತಮ್ಮ ಔಟ್‌ಲೆಟ್‌ನಿಂದ ಕುಟುಂಬದ ಸದಸ್ಯರೆಲ್ಲರಿಗೂ ಉಚಿತವಾಗಿ ಪಿಜ್ಜಾ ನೀಡುವುದಾಗಿ ಹೇಳಿದರು. ಆದರೆ ದೀಪಾಲಿಯು ಇದರಿಂದ ನನ್ನ ಧಾರ್ಮಿಕ ಭಾವನೆ ಹಾಗೂ ಸಂಪ್ರದಾಯಕ್ಕೆ ಧಕ್ಕೆಯಾಗಿದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದು, ಸಾಮಾನ್ಯ ಸ್ಥಿತಿಗೆ ಮರಳಿ ಬರಲು ಹಣ ವ್ಯಯಿಸಬೇಕಾಗುತ್ತದೆ ಎಂದು ದೂರಿನಲ್ಲಿ ದೀಪಾಲಿ ವಿವರಿಸಿದ್ದಾರೆ.
ಪಿಜ್ಜಾ ಕಂಪನಿಯು ಪ್ರಾಣಿಯ ಮಾಂಸವನ್ನು ಉಪಯೋಗಿಸಿ ಆಹಾರವನ್ನು ಕಲುಷಿತಗೊಳಿಸುತ್ತಿದೆ. ಇದರಿಂದ ತನ್ನ ಧಾರ್ಮಿಕ ಸಂಪ್ರದಾಯದ ಮೇಲೆ ದೊಡ್ಡ ಪರಿಣಾಮ ಬೀರಿದ್ದು, ತನಗೆ ಪಾಪದ ಪ್ರಜ್ಞೆ ಕಾಡುತ್ತಿದ್ದು, ಮಾನಸಿಕ ಖಿನ್ನತೆಯನ್ನು ಅನುಭವಿಸುವುದಾಗಿದೆ.” ಎಂದು ಆ ಮಹಿಳೆ ದೂರಿನಲ್ಲಿ ಹೇಳಿದ್ದಾಳೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯವು, ಮಹಿಳೆಯ ದೂರಿನ ಅರ್ಜಿಗೆ ಉತ್ತರಿಸುವಂತೆ ಪಿಜ್ಜಾ ರೆಸ್ಟೊರೆಂಟ್‌ಗೆ ಆದೇಶಿಸಿದ್ದು, ಮಾರ್ಚ್ 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.