Connect with us

LATEST NEWS

45 ದಿನಗಳೊಳಗೆ ಚುನಾವಣೆ ನಡೆಸದಿದ್ದರೆ ಕುಸ್ತಿ ಸಂಸ್ಥೆ ಅಮಾನತು: UWW ಎಚ್ಚರಿಕೆ

ಹೊಸದಿಲ್ಲಿ, ಜೂನ್ 01: ನವದೆಹಲಿಯ ಜಂತರ್‌ಮಂತರ್‌ನಲ್ಲಿ ಧರಣಿನಿರತ ಕುಸ್ತಿಪಟುಗಳ ಜೊತೆ ಭಾನುವಾರ ರಾತ್ರಿ ಪೊಲೀಸರು ತೋರಿದ ವರ್ತನೆಯನ್ನು ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಖಂಡಿಸಿದೆ.

‘‘ಭಾರತೀಯ ಕುಸ್ತಿ ಫೆಡರೇಶನ್ ನ ವರಿಷ್ಠ ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ನಡೆಸಲಾಗುತ್ತಿರುವ ತನಿಖೆಯ ಬಗ್ಗೆಯೂ ಯುಡಬ್ಲುಡಬ್ಲು ಅಸಮಾಧಾನ ವ್ಯಕ್ತಪಡಿಸಿದೆ. ಒಂದು ವೇಳೆ ಭಾರತೀಯ ಕುಸ್ತಿ ಫೆಡರೇಶನ್ನ ಆಡಳಿತ ಮಂಡಳಿಗೆ 45 ದಿನಗಳೊಳಗೆ ಚುನಾವಣೆಗಳು ನಡೆಯದೇ ಇದ್ದಲ್ಲಿ ಫೆಡರೇಶನ್ನನ್ನು ಅಮಾನತಿನಲ್ಲಿರಿಸುವುದಾಗಿಯೂ ಎಚ್ಚರಿಕೆ ನೀಡಿದೆ.

‘‘ಕುಸ್ತಿಪಟುಗಳ ಬಂಧನವನ್ನು ಹಾಗೂ ಅವರನ್ನು ನಡೆಸಿಕೊಂಡ ರೀತಿಯನ್ನು ಯುಡಬ್ಲುಡಬ್ಲು ಬಲವಾಗಿ ಖಂಡಿಸಿದೆ. ಬ್ರಿಜ್ ಭೂಷಣ್ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ಫಲಿತಾಂಶಗಳ ಕೊರತೆಯಿರುವ ಬಗ್ಗೆ ಅದು ಅಸಮಾಧಾನ ವ್ಯಕ್ತಪಡಿಸಿದೆ. ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳ ಬಗ್ಗೆ ಸಮಗ್ರ ಹಾಗೂ ಪಕ್ಷಪಾತ ರಹಿತ ತನಿಖೆಯಾಗಬೇಕೆಂದು ಯುಡಬ್ಲುಡಬ್ಲು ಹೇಳಿಕೆಯೊಂದರಲ್ಲಿ ತಿಳಿಸಿದೆ’ ಎಂದು ಎನ್ಡಿಟಿವಿ ವರದಿ ಮಾಡಿದೆ.

ಭಾರತೀಯ ಕುಸ್ತಿ ಫೆಡರೇಶನ್ನ ಮುಂದಿನ ನೂತನ ಚುನಾವಕ ಮಹಾ ಸಭೆಯ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಅಡ್ಹಾಕ್ ಸಮಿತಿಗೆ ಯುಡಬ್ಲುಡಬ್ಲು ಮನವಿ ಮಾಡಿದೆ. ಚುನಾಯಿತ ಮಂಡಳಿಯ ಸಭೆಯನ್ನು ನಡೆಸಲು ನಿಗದಿಪಡಿಸಲಾದ 45 ದಿನಗಳ ಗಡುವನ್ನು ಗೌರವಿಸಬೇಕಾಗಿದೆ. ಒಂದು ವೇಳೆ ಅದನ್ನು ಪಾಲಿಸಲು ವಿಫಲವಾದಲ್ಲಿ, ಭಾರತೀಯ ಕುಸ್ತಿ ಫೆಡರೇಶನ್ ಅನ್ನು ಅಮಾನತಿನಲ್ಲಿರಿಸಲಾಗುವುದು.

ಇದರಿಂದಾಗಿ ಅಥ್ಲೀಟ್‌ಗಳನ್ನು ತಟಸ್ಥ ಧ್ವಜದಡಿ ಸ್ಪರ್ಧಿಸುವುದಕ್ಕೆ ಬಲವಂತ ಪಡಿಸಿದಂತಾಗುತ್ತದೆ. ಹೊಸದಿಲ್ಲಿಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದ ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ ಅನ್ನು ಇದೇ ಕಾರಣದಿಂದಾಗಿ ಬೇರೆಡೆ ವರ್ಗಾಯಿಸಲಾಗಿದೆ’’ ಎಂದು ಹೇಳಿಕೆ ತಿಳಿಸಿದೆ. 2023ರ ವಿಶ್ವಕುಸ್ತಿ ಚಾಂಪಿಯನ್ಶಿಪ್ ಸರ್ಬಿಯ ರಾಜಧಾನಿ ಬೆಲ್ ಗ್ರೇಡ್ ನಲ್ಲಿ ಸೆಪ್ಟೆಂಬರ್ 16ರಿಂದ 24ರವರೆಗೆ ನಡೆಯಲಿದೆ.

ದೌರ್ಜನ್ಯ ಹಾಗೂ ಕಿರುಕುಳದ ಆರೋಪಗಳನ್ನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ (WFI)ನ ಅಧ್ಯಕ್ಷರ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ ನಡೆಸುತ್ತಿರುವ ಭಾರತದಲ್ಲಿನ ಪರಿಸ್ಥಿತಿಯನ್ನು ಹಲವಾರು ತಿಂಗಳುಗಳಿಂದ ಸಂಯುಕ್ತ ಜಾಗತಿಕ ಕುಸ್ತಿಕ್ರೀಡೆ ಸಂಘಟನೆ ಗಮನಿಸುತ್ತಾ ಬಂದಿದೆ. ಡಬ್ಲುಎಫ್ಐ ಅಧ್ಯಕ್ಷರು ಪ್ರಸಕ್ತ ಸಂಸ್ಥೆಯ ಉಸ್ತುವಾರಿ ಹೊಂದಿಲ್ಲವೆಂಬುದನ್ನು ಕೂಡಾ ತಾನು ಗಮನಿಸಿರುವುದಾಗಿ ಡಬ್ಲುಡಬ್ಲು ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ ಶೀಘ್ರದಲ್ಲೇ ಯುಡಬ್ಲುಡಬ್ಲು ಕುಸ್ತಿಪಟುಗಳ ಜೊತೆ ಮಾತುಕತೆ ನಡೆಸಲಿದ್ದು, ಅವರ ಪರಿಸ್ಥಿತಿ ಹಾಗೂ ಸುರಕ್ಷತೆಯ ಬಗ್ಗೆ ವಿಚಾರಿಸಲಿದೆ ಹಾಗೂ ಅವರು ವ್ಯಕ್ತಪಡಿಸಿರುವ ಆತಂಕಗಳ ಬಗ್ಗೆ ನ್ಯಾಯಸಮ್ಮತ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ತನ್ನ ಬೆಂಬಲವನ್ನು ದೃಢಪಡಿಸುತ್ತದೆ’’ ಎಂದು ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *