Connect with us

  LATEST NEWS

  ಕುಸ್ತಿಪಟುಗಳು ಕೇವಲ ಆರೋಪವಷ್ಟೇ ಮಾಡಿದ್ದಾರೆ, ಅದಕ್ಕೆ ಸಾಕ್ಷ್ಯವನ್ನು ನೀಡಿಲ್ಲ; ಕೆ ಅಣ್ಣಾಮಲೈ

  ವದೆಹಲಿ, ಮೇ 30: ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ಕುಸ್ತಿಪಟುಗಳು ಕೇವಲ ಆರೋಪಗಳನ್ನಷ್ಟೇ ಮಾಡಿದ್ದಾರೆ, ಅದಕ್ಕೆ ಪೂರಕವಾದ ಸಾಕ್ಷ್ಯವನ್ನು ಒದಗಿಸಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
  ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಸ್ತಿಪಟುಗಳು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ ನಂತರ ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿ ಇದೆ. 99.9 ಶೇಕಡಾ ಪ್ರಕರಣಗಳಲ್ಲಿ ಎಫ್‌ಐಆರ್‌ ಆದ ತಕ್ಷಣವೇ ಬಂಧಿಸಲಾಗುವುದಿಲ್ಲ. ಸಿಬಿಐ ಕೂಡ ಚಾರ್ಜ್‌ಶೀಟ್ ಸಲ್ಲಿಸುವಾಗ ಮಾತ್ರ ಬಂಧಿಸುತ್ತದೆ, ಎಫ್‌ಐಆರ್‌ನಲ್ಲಿ ಇರುವ ಮಾಹಿತಿಯನ್ನು ನೋಡಿ ಅಲ್ಲ ಎಂದು ಹೇಳಿದರು.
  ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಪೂರಕವಾಗಿ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಕೇವಲ ಆರೋಪ ಮಾಡಿದ್ದಾರಷ್ಟೇ. ಸರ್ಕಾರವು ಎಫ್‌ಐಆರ್ ದಾಖಲಿಸಿದೆ, ಇದಕ್ಕಾಗಿ ಸಮಿತಿಯನ್ನು ರಚಿಸಿದೆ, ಕಾಲಮಿತಿಯೊಳಗೆ ತನಿಖೆ ನಡೆಸುವುದಾಗಿ ಹೇಳಿದೆ. ಆದರೆ ಜಂತರ್‌ಮಂತರ್‌ನಲ್ಲಿ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸದೆ ಬಂಧನಕ್ಕೆ ಒತ್ತಾಯಿಸುವುದು ಸರಿಯಲ್ಲ ಎಂದು ಅಣ್ಣಾ ಮಲೈ ಹೇಳಿದರು.
  ಆರೋಪ ಮಾಡಿದ ಮಾತ್ರಕ್ಕೆ ಬಂಧಿಸಬೇಕಿಲ್ಲ:
  ಇನ್ನು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಿದರೆ, ದೆಹಲಿ ಪೊಲೀಸರು ಕಾರ್ಯನಿರ್ವಹಿಸಲು ಬದ್ಧರಾಗಿದ್ದಾರೆ ಎಂದ ಕೆ ಅಣ್ಣಾಮಲೈ, ಒಬ್ಬ ಮಹಿಳೆ ಯಾರೊಬ್ಬರ ವಿರುದ್ಧ ಆರೋಪ ಮಾಡಿದರೆ ಮತ್ತು ವಿಚಾರಣೆಗೆ ಮುನ್ನವೇ ತಕ್ಷಣ ಬಂಧಿಸಲು ಪ್ರಯತ್ನಿಸಿದರೆ ‘ದೇಶದಲ್ಲಿ ಕಾನೂನು ಸುವ್ಯವಸ್ಥೆ ಏನಾಗಬಹುದು?’ ಎಂದು ಪ್ರಶ್ನಿಸಿದರಲ್ಲದೇ, ಯಾರಾದರೂ ದೂರು ಸಲ್ಲಿಸಬಹುದು. ನಂತರ ಅದು ಕಾನೂನು ಪ್ರಕ್ರಿಯೆಯ ಮೂಲಕ ಹೋಗುತ್ತದೆ. ಅದರ ಬಗ್ಗೆ ತನಿಖೆ ನಡೆಯಬೇಕು ಮತ್ತು ಸಾಕ್ಷ್ಯಾಧಾರಗಳಿದ್ದರೆ ಬಂಧನ ಮಾಡಬಹುದು. ಡಿಎಂಕೆ ಸಚಿವರ ವಿರುದ್ಧ ನಾವು ಭ್ರಷ್ಟಾಚಾರದ ಆರೋಪ ಮಾಡಿದ ಮಾತ್ರಕ್ಕೆ ಕೂಡಲೇ ಅವರನ್ನು ಬಂಧಿಸಲು ಪ್ರಯತ್ನಿಸುವುದು ಸರಿಯೇ ಎಂದು ಅಣ್ಣಾ ಮಲೈ ಕೇಳಿದರು.
  ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನು ಅಲ್ಲಿಂದ ತೆರವುಗೊಳಿಸಲು ಪೊಲೀಸರು ಪ್ರತಿಭಟನಾಕಾರರ ಟೆಂಟ್‌ಗಳನ್ನು ಕಿತ್ತುಹಾಕಿದ್ದರು. ಹೀಗಾಗಿ ಇದರ ಬೆನ್ನಲ್ಲೇ ಭಾನುವಾರ ನೂತನ ಸಂಸತ್ ಕಟ್ಟಡದ ಎದುರು ಮಹಿಳಾ ಮಹಾ ಪಂಚಾಯತ್ ನಡೆಸಲು ಕುಸ್ತಿಪಟುಗಳು ನಿರ್ಧರಿಸಿದ್ದರು. ಪ್ರತಿಭಟನಾ ಮೆರವಣಿಗೆಗೆ ಮುಂದಾದಾಗ ಕ್ಯಾತೆ ತೆಗೆದ ದೆಹಲಿ ಪೊಲೀಸರು ಮಾರ್ಗದುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಿ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

  ಕುಸ್ತಿಪಟುಗಳಾದ ವಿನೇಶ್​ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಕೆಲವು ಕುಸ್ತಿಪಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಅವರನ್ನು ರಸ್ತೆಯಲ್ಲಿ ಎಳೆದಾಡಿ ಅಲ್ಲಿಂದ ತೆರವುಗೊಳಿಸಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply