FILM
ದರ್ಶನ್ ನನ್ನು ಚಪ್ಪಲಿ ಇಲ್ಲದೆ ನಿಲ್ಲಿಸಿದಾಗ ಅವನ ಸಪೋರ್ಟ್‌ಗೆ ಬಂದವನು ನಾನು: ಜಗ್ಗೇಶ್
ಮೈಸೂರು, ಫೆಬ್ರವರಿ 24: ‘ನವರಸ ನಾಯಕ’ ಜಗ್ಗೇಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಮಧ್ಯೆ ನಡೆಯುತ್ತಿರುವ ವಾಕ್ಸಮರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ನಟ ಜಗ್ಗೇಶ್ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ಹಿರಿಯ ನಟ ಜಗ್ಗೇಶ್ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ.
ಮೈಸೂರಿನಲ್ಲಿ ‘ತೋತಾಪುರಿ’ ಚಿತ್ರದ ಚಿತ್ರೀಕರಣದ ವೇಳೆ ನಮಗೆ ಏಕಾಏಕಿ ಕೆಲವು ಹುಡುಗರು ಮುತ್ತಿಗೆ ಹಾಕಿದರು. ಈ ವೇಳೆ ನಮ್ಮ ಚಿತ್ರತಂಡವೂ ಕೂಡ ಆತಂಕಕ್ಕೊಳಗಾಯಿತು. ನಾನೇ ಅವರಿಗೆ ಎಷ್ಟು ಜನ ಬಂದರೂ ಈ ಜಗ್ಗೇಶ್ ಹೆದರಲ್ಲ ಎಂದೆ. 40-50 ವರ್ಷಗಳಿಂದ ಸೇವೆ ಸಲ್ಲಿಸಿದ್ದಕ್ಕೆ ಚಿತ್ರರಂಗದಲ್ಲಿ ಒಳ್ಳೆಯ ಸನ್ಮಾನವನ್ನು ಮಾಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ನಾನು ನಟ ದರ್ಶನ್ನನ್ನು ಬಹಳ ಪ್ರೀತಿಸುತ್ತೇನೆ. ಹಿಂದೆ ಪೊಲೀಲಿಸರು ಅವನನ್ನು ಚಪ್ಪಲಿ ಇಲ್ಲದೆ ನಿಲ್ಲಿಸಿದ್ದರು. ಆಗ ಅವನ ಸಪೋರ್ಟ್‌ಗೆ ಬಂದವನು ನಾನು. ಮನೆಯೊಳಗೆ ಚಪ್ಪಲಿ ಇಲ್ಲದೆ ನಿಲ್ಲಿಸೋದು ಸರಿಯಲ್ಲ. ದೊಡ್ಡ ನಟನನ್ನು ಸಣ್ಣ ಹೀರೋಯಿನ್ ಮನೆಯಲ್ಲಿ ನಿಲ್ಲಿಸಿದ್ದನ್ನು ಮರೆತುಬಿಟ್ಟರಾ? ಕಾನೂನು ಪ್ರಕಾರ ಕ್ರಮ ಕೈಗೊಂಡು ಆತನನ್ನ ಕಳುಹಿಸಿ ಎಂದು ಪೋಲಿಸರಿಗೆ ನಾನು ಹೇಳಿದ್ದೆ. ಅದನ್ನು ದರ್ಶನ್ ಮರೆತುಬಿಟ್ಟಂತಿದೆ” ಎಂದು ಬೇಸರಗೊಂಡರು.
“ಈ ಹಿಂದೆ ದರ್ಶನ್‌ಗೆ ಅಪಘಾತವಾದಾಗ ಕಾಲ್ ಮಾಡಿ ವಿಚಾರಿಸಿದ್ದೆ. ಈಗ ಎಲ್ಲಿದ್ದಾರೆ ಅವರೆಲ್ಲಾ, ಇದು ಕೃತಜ್ಞತೆ ಇಲ್ಲದ ಸಮಾಜ ಎಂದು ಅನಿಸುತ್ತೆ. ನನ್ನ ಕೈ ಕೆಳಗೆ ಎಷ್ಟೋ ನಟ, ನಟಿಯರು ತಯಾರಾಗಿದ್ದಾರೆ. ನಮ್ಮ ಜೀವನದ ಕಡೆಯವರೆಗೂ ಬರುವುದು ನಮ್ಮಲ್ಲಿರುವ ಗುಣ. ಹಣ ಎಲ್ಲರಿಗೂ ಸಿಗುತ್ತೆ, ಆದರೆ ಗುಣ ಶಾಶ್ವತವಾಗಿರುತ್ತದೆ. ಇದನ್ನು ಎಲ್ಲರೂ ತಿಳಿಯಬೇಕು” ಎಂದು ಜಗ್ಗೇಶ್ ಮಾತನಾಡಿದ್ದಾರೆ.