Connect with us

    LATEST NEWS

    ತಾಯ್ನಾಡಿಗೆ ವಾಪಸ್ಸಾದ ವೀರಯೋಧ ಅಭಿನಂದನ್‌ಗೆ ಅದ್ದೂರಿ ಸ್ವಾಗತ

    ತಾಯ್ನಾಡಿಗೆ ವಾಪಸ್ಸಾದ ವೀರಯೋಧ ಅಭಿನಂದನ್‌ಗೆ ಅದ್ದೂರಿ ಸ್ವಾಗತ

    ನವದೆಹಲಿ :ಮಾರ್ಚ್ 01 : ಪಾಕಿಸ್ತಾನದ ಸೇನೆ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಕೊನೆಗೂ ಭಾರತಕ್ಕೆ ಹಸ್ತಾಂತರವಾಗಿದ್ದಾರೆ.

    ಇಂದು ರಾತ್ರಿಯ ಸುಮಾರು 9 ಗಂಟೆ 20 ನಿಮಿಷಕ್ಕೆ ಪಂಜಾಬಿನ ವಾಘಾ ಗಡಿಯ ಮೂಲಕ ಭಾರತಕ್ಕೆ ಆಗಮಿಸಿದರು. ಭಾರಿ ಭದ್ರತೆಯ ನಡುವೆ ವಾಯುಪಡೆಯ ಅಧಿಕಾರಿಗಳ ಜತೆಯಲ್ಲಿ ಅಭಿನಂದನ್‌ ವಾಘಾ ಗಡಿ ಗೇಟ್ ಮೂಲಕ ಭಾರತದ ನೆಲದ ಮೇಲೆ ಹೆಜ್ಜೆ ಇರಿಸಿದರು.

    ಅಭಿನಂದನ್‌ ಸ್ವಾಗತಕ್ಕೆ ಭಾರತ – ಪಾಕಿಸ್ಥಾನದ ಅಟಾರಿ-ವಾಘಾ ಗಡಿಯಲ್ಲಿ ವಾಯುಪಡೆ, ಸೇನಾಪಡೆ ಸಕಲ ಸಿದ್ಧತೆಗಳನ್ನು ನಡೆಸಿತ್ತು. ಅಸಂಖ್ಯತ ಸಾರ್ವಜನಿಕರು, ದೇಶದ ವಿವಿಧ ಮಾದ್ಯಮಗಳ ಪ್ರತಿನಿಧಿಗಳು ಅಭಿನಂದನ್ ಅವರನ್ನು ಸ್ವಾಗತಿಸುವ ಸಲುವಾಗಿ ಬೆಳಗ್ಗೆಯಿಂದ ಕಾದು ಕುಳಿತಿದ್ದರು.

    ಆದರೆ ಪಾಕಿಸ್ತಾನ ಸತಾಯಿಸಿ ಕೊನೆಗೂ ರಾತ್ರಿ ಹೊತ್ತಲ್ಲಿ ಹಸ್ತಾಂತರಿಸಿದ್ದು ಬೆಂಗಾವಲು ಪಡೆಗಳ ವಾಹನಗಳಲ್ಲಿ ಅಭಿನಂದನ್‌ ಅವರನ್ನು ಕರೆದುಕೊಂಡು ಹೋಗಲಾಯಿತು.

    ಈ ಕುರಿತು ಮಾಹಿತಿ ನೀಡಿದ ವಾಯುಪಡೆಯ ಆರ್‌ಜಿಕೆ ಕಪೂರ್‌, ವಾಯಪಡೆಯ ನೀತಿ ನಿಯಮಗಳಂತೆ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಭಾರತಕ್ಕೆ ಒಪ್ಪಿಸಲಾಗಿದೆ. ಅವರನ್ನು ಈಗ ಸಂಪೂರ್ಣ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು. ಪ್ಯಾರಾಚೂಟ್‌ನಿಂದ ಜಿಗಿದ ಪರಿಣಾಮ ಆಗಿರುವ ಒತ್ತಡಗಳ ಹಿನ್ನೆಲೆಯಲ್ಲಿ ಇದು ಅಗತ್ಯ ಎಂದಿದ್ದಾರೆ.

    ಇದೇ ವೇಳೆ ಪಾಕಿಸ್ತಾನ ಸರಕಾರ ಬಿಡುಗಡೆ ಮಾಡಿರುವ ಅಭಿನಂದನ್‌ ವೀಡಿಯೋ ಸಾಕಷ್ಟು ವಿವಾದ ಮಾಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾಯುಪಡೆ, ಅಭಿನಂದನ್‌ ಅವರಿಂದ ಬಲವಂತವಾಗಿ ವೀಡಿಯೋ ಮಾಡಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

    ಫೆಬ್ರವರಿ 27ರಂದು ಪಾಕ್ ವಾಯುಪಡೆ ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಬಂದಾಗ ಮಿಗ್‌-21 ವಿಮಾನದಲ್ಲಿ ಅವುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಎಫ್‌-16 ವಿಮಾನವನ್ನು ಹೊಡೆದುರುಳಿಸಿದ್ದರು. ಬಳಿಕ ಅವರ ವಿಮಾನ ಅಪಘಾತಕ್ಕೀಡಾಗಿ ಪಾಕ್ ಪ್ರದೇಶದಲ್ಲಿ ಬಿದ್ದಿದ್ದು, ಆ ಸಂದರ್ಭದಲ್ಲಿ ಹೊ ಜಿಗಿದಿದ್ದ ಅಭಿನಂದನ್ ಪಾಕ್ ಸೇನೆಯ ಕೈಗೆ ಸಿಕ್ಕಿ ಬಂಧನಕ್ಕೊಳಗಾಗಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply