Connect with us

    DAKSHINA KANNADA

    ಸಾಲ ಮರುಪಾವತಿ ಹೆಸರಿನಲ್ಲಿ ಕೋಮುದ್ವೇಷ, ನಂದಾವರದಲ್ಲಿ ನಡೆಯುತ್ತಿದೆ ಕೋಮುವಾದಿಗಳ ಅಟ್ಟಹಾಸ

    ಸಾಲ ಮರುಪಾವತಿ ಹೆಸರಿನಲ್ಲಿ ಕೋಮುದ್ವೇಷ, ನಂದಾವರದಲ್ಲಿ ನಡೆಯುತ್ತಿದೆ ಕೋಮುವಾದಿಗಳ ಅಟ್ಟಹಾಸ

    ಮಂಗಳೂರು, ಮಾರ್ಚ್ 2: ಸಾಲ ಮರುಪಾವತಿ ವಿಚಾರದಲ್ಲಿ ಎರಡು ಕೋಮುಗಳ ನಡುವೆ ದ್ವೇಷ ಬಿತ್ತುವಂತಹ ವ್ಯವಸ್ಥಿತ ಸಂಚೊಂದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯಲ್ಲಿ ಹಲವು ಸ್ತ್ರೀ ಶಕ್ತಿ ಗುಂಪುಗಳು ಕಾರ್ಯಾಚರಿಸುತ್ತಿದ್ದು, ಇವುಗಳಲ್ಲಿ ಜಿಲ್ಲೆಯ ಎಲ್ಲಾ ಜಾತಿ, ಧರ್ಮದ ಮಹಿಳೆಯರು ಸೇರಿಕೊಂಡಿದ್ದಾರೆ.

    ಅಲ್ಲದೆ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಗುಂಪಿನಲ್ಲೇ ಸಾಲವನ್ನೂ ಪಡೆದು ತಮ್ಮ ಬೇಡಿಕೆಯನ್ನು ಪೂರೈಸಿಕೊಳ್ಳುತ್ತಿದ್ದಾರೆ.

    ಕೆಲವು ಗುಂಪುಗಳಲ್ಲಿ ಸಾಲ ಮರುಪಾವತಿ ಆಗದೇ ಇದ್ದ ಪಕ್ಷದಲ್ಲಿ ಸಂಬಂಧಪಟ್ಟ ಬ್ಯಾಂಕು ಅಥವಾ ಸಂಸ್ಥೆಯ ಸಿಬ್ಬಂದಿಗಳು ಆ ಗುಂಪುಗಳನ್ನು ಸಂಪರ್ಕಿಸುವುದೂ ಸ್ತ್ರೀ ಶಕ್ತಿ ಗುಂಪುಗಳ ವ್ಯವಸ್ಥೆಯ ಒಂದು ಅಂಗವೂ ಆಗಿದೆ.

    ಆದರೆ ಬಂಟ್ವಾಳದ ನಂದಾವರದಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಾಮಾಜದಲ್ಲಿ ಕೋಮುದ್ವೇಷವನ್ನು ಬಿತ್ತುವ ಕಾರ್ಯದಲ್ಲಿ ನಂದಾವರದ ಗುಂಪೊಂದು ನಿರತವಾಗಿದೆ.

    ಈ ಗುಂಪಿನಲ್ಲಿರುವ ವ್ಯಕ್ತಿಗಳ ಪ್ರಕಾರ ಸಾಲ ಮರುಪಾವತಿಗಾಗಿ ಸಂಸ್ಥೆಗಳಿಂದ ಬರುವವರು ಮಹಿಳೆಯರೇ ಆಗಿರಬೇಕು.

    ಮುಸ್ಲಿಮರಲ್ಲದೆ ಅನ್ಯ ಧರ್ಮದ ಪುರುಷರು ಮುಸ್ಲಿಂ ಮಹಿಳೆಯರಿರುವ ಗುಂಪುಗಳಿಗೆ ಬರಬಾರದು.

    ಇದೇ ಕಾರಣಕ್ಕಾಗಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಇಬ್ಬರು ಯುವಕರನ್ನು ಅಡ್ಡಗಟ್ಟಿರುವ ಈ ಗುಂಪು ತಮ್ಮ ಕೋಮುದ್ವೇಷವನ್ನು ಈ ಯುವಕರ ಮೇಲೆ ಕಾರಿದೆ.

    ಯುವಕರ ಬೈಕುಗಳಲ್ಲಿ ಹನುಮಂತನ, ಶಿವಾಜಿಯ ಚಿತ್ರಗಳಿವೆ ಎನ್ನುವುದನ್ನು ಪತ್ತೆ ಹಚ್ಚಿರುವ ಈ ವ್ಯಕ್ತಿಗಳು ಯುವಕರು ಆರ್.ಎಸ್.ಎಸ್ ಗೆ ಸೇರಿದವರು, ಮುಸ್ಲಿಂ ಮಹಿಳೆಯರನ್ನು ಬಲೆಗೆ ಹಾಕಿಕೊಳ್ಳಲು ಬರುತ್ತಿದ್ದಾರೆ ಎನ್ನುವ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ.

    ಸಾಲ ಮರುಪಾವತಿಗಾಗಿ ಮಹಿಳೆಯರನ್ನೇ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಕಳುಹಿಸಬೇಕು ಎನ್ನುವ ಫರ್ಮಾನನ್ನೂ ಈ ಕೋಮುವಾದಿ ವ್ಯಕ್ತಿಗಳು ಹೊರಡಿಸಿದ್ದಾರೆ.

    ಅಲ್ಲದೆ ಇದೇ ರೀತಿಯ ಕ್ರಮವನ್ನು ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಆರಂಭಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಶಾಂತವಾಗಿರುವ ಜಿಲ್ಲೆಯಲ್ಲಿ ಸಾಲ ಮರುಪಾವತಿ ವಿಚಾರವನ್ನೇ ಮುಂದಿಟ್ಟುಕೊಂಡು ಮತ್ತೆ ಶಾಂತಿ ಕದಡುವ ಪ್ರಯತ್ನವು ನಂದಾವರದಿಂದ ಆರಂಭಗೊಂಡಿದೆ.

    ತಮ್ಮ ಮನೆಯ ಮಹಿಳೆಯರನ್ನು ಸ್ತ್ರೀ ಶಕ್ತಿ ಗುಂಪುಗಳಿಗೆ ಸೇರಿಸಿ , ಗುಂಪಿನಿಂದ ಸಾಲ ಪಡೆದ ಬಳಿಕ ಸಾಲವನ್ನು ಕಟ್ಟಲಾಗದ ಇಂಥ ವ್ಯಕ್ತಿಗಳು ಇದಕ್ಕೆ ಕೋಮು ಬಣ್ಣವನ್ನೂ ನೀಡಲಾರಂಭಿಸಿರುವುದು ದುರಾದೃಷ್ಟ.

    ಸಂಬಂಧಪಟ್ಟ ಪೋಲೀಸ್ ಇಲಾಖೆ ಕೂಡಲೇ ಈ ಬಗ್ಗೆ ಜಾಗೃತಗೊಂಡು ನಂದಾವರದಲ್ಲಿ ನಡೆದ ಪ್ರಕರಣದ ತನಿಖೆ ನಡೆಸಬೇಕಿದೆ.

    ನಂದಾವರದಲ್ಲಿ ಚಿಗುರೊಡೆಯುತ್ತಿರುವ ಈ ಕೋಮುದ್ವೇಷದ ಬೀಜವನ್ನು ಅಲ್ಲಿಯೇ ಚಿವುಟಿ ಬಿಡುವ ಕೆಲಸವನ್ನು ಜಿಲ್ಲೆಯ ಪೋಲೀಸರು ಮಾಡಬೇಕಿದೆ.

    ಇಲ್ಲದೇ ಹೋದಲ್ಲಿ ಜಿಲ್ಲೆಯಲ್ಲಿ ಮತ್ತೆ ಶಾಂತಿಗೆ ಭಂಗ ತರುವ ಘಟನೆಗಳು ಸಂಭವಿಸುವುದಿಲ್ಲ ಎನ್ನುವುದಕ್ಕೆ ಯಾವುದೇ ಗ್ಯಾರಂಟಿಯೂ ಇಲ್ಲವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply