LATEST NEWS
ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಬಸ್ ನಿಲ್ದಾಣಗಳ ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿ ಆದೇಶ

ಅವೈಜ್ಞಾನಿಕ ಸ್ಮಾರ್ಟ್ ಸಿಟಿ ಬಸ್ ನಿಲ್ದಾಣಗಳ ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿ ಆದೇಶ
ಮಂಗಳೂರು ನವೆಂಬರ್ 26: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಗಳ ಕಾಮಗಾರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಡೆ ನೀಡಿದ್ದಾರೆ.
ಪ್ರಸ್ತುತ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಬಸ್ ಬೇ ಗಳು ಸ್ಥಳೀಯ ಹವಮಾನಕ್ಕೆ ಅನುಗುಣವಾಗಿಲ್ಲ ಹಾಗೂ ಅವೈಜ್ಞಾನಿಕವಾಗಿವೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ನಿರ್ಮಾಣದ ಕಾಮಾಗಾರಿಯನ್ನು ತಡೆಹಿಡಿಯಬೇಕೆಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮಾದರಿಯಾಗಿ ಮೂರು ಬಸ್ ಬೇಗಳನ್ನು ಮಾತ್ರ ನಿರ್ಮಾಣ ಮಾಡಿ ಅದರ ಸಾಧಕ – ಭಾಧಕಗಳನ್ನು ನೋಡಿ ಮುಂದುವರೆಯುವಂತೆ ಈ ಹಿಂದೆ ಸೂಚಿಸಲಾಗಿತ್ತಾದರೂ, ನಗರದ ಕಾವೂರು, ಮಣ್ಣಗುಡ್ಡೆ, ಕದ್ರಿ ಹಿಲ್ಸ್ ಹೀಗೇ ಅನೇಕ ಕಡೆ ಈಗಾಗಲೇ ಅತೀ ದುಬಾರಿಯಾದ ಇಂತಹ ಸ್ಮಾರ್ಟ್ ಬಸ್ ಬೇ ಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಂಗಳೂರು ನಗರದಲ್ಲಿ 27 ಸ್ಮಾರ್ಟ್ ಬಸ್ ಬೇ ಗಳನ್ನು ನಿರ್ಮಾಣ ಮಾಡಲು ಬೆಂಗಳೂರಿನ ಖಾಸಾಗಿ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಕರಾವಳಿಯಲ್ಲಿ ಬಿಸಿಲು ಮತ್ತು ಮಳೆ ಅಧಿಕವಾಗಿದ್ದು, ಇಂತಹ ಸ್ಮಾರ್ಟ್ ಬಸ್ ಬೇ ಗಳು ಈ ಎರಡರಿಂದಲೂ ರಕ್ಷಣೆ ನೀಡಲು ವಿಫಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಯಲ್ಲಿ ಜಿಲ್ಲಾಧಿಕಾರಿಗಳು ಬಸ್ ಬೇ ನಿರ್ಮಾಣದ ಕಾಮಾಗಾರಿ ತಡೆಗೆ ಆದೇಶಿಸಿದ್ದಾರೆ.