Connect with us

DAKSHINA KANNADA

ಡಿಜಿಟಲ್ ಇಂಡಿಯಾದಲ್ಲಿ ಒಂದು ಆಧಾರ್ ಕಾರ್ಡ್ ಬರಲು ಬೇಕಾದ ಸಮಯ ಬರೋಬ್ಬರಿ 5 ವರ್ಷ…!!

ಸುಳ್ಯ ಫೆಬ್ರವರಿ 20:ಡಿಜಿಟಲ್ ಇಂಡಿಯಾದಲ್ಲಿ ಬಾಲಕಿಯೊಬ್ಬಳಿಗೆ ಆಧಾರ್ ಗುರುತಿನ ಚೀಟಿ ಸಿಗಬೇಕಾದರೆ ಒಂದಲ್ಲ ಎರಡಲ್ಲ, ಬರೋಬ್ಬರಿ ಐದು ವರ್ಷ ಪರದಾಟ ಪಡಬೇಕಾದ ಪರಿಸ್ಥಿತಿ ಬುದ್ದಿವಂತರ ಜಿಲ್ಲೆಯೆಂದು ಕರೆಸಿಕೊಳ್ಳುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ.


ಸುಳ್ಯದ ಪೆರುವಾಜೆ ಗ್ರಾಮದ ಕುಂಡಡ್ಕದ ಕೂಲಿ ಕಾರ್ಮಿಕ ವರ್ಗಕ್ಕೆ ಸೇರಿದ ಪರಿಶಿಷ್ಟ ಜಾತಿಯ ಕುಟುಂಬದ ಬಾಬು ಹಾಗೂ ಗೀತಾ ದಂಪತಿಯ ಪುತ್ರಿ ಬಾಲಕಿ ಪವಿತ್ರಾ ಕಳೆದ ಐದು ವರ್ಷದಿಂದ ಆಧಾರ್ ಕಾರ್ಡ್ ಗಾಗಿ ಪರದಾಟ ನಡೆಸಿದ್ದಾಳೆ. ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಗೆ ಆಧಾರ್ ಗುರುತಿನ ಚೀಟಿ ಬೇಕೆಂದು ಕಳೆದ ಐದು ವರ್ಷಗಳಿಂದ ಬಾಲಕಿ ಪೋಷಕರು ಸುತ್ತಾಡದ ಕಚೇರಿಗಳಿಲ್ಲ. ಎಷ್ಟೇ ಪ್ರಯತ್ನಿಸಿದರೂ, ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.


ಖಾಸಗಿ, ಸರಕಾರಿ ಕೇಂದ್ರಗಳಲ್ಲಿ 13ಕ್ಕೂ ಅಧಿಕ ರಶೀದಿ ನೋಂದಾವಣೆ ಮಾಡಲಾಗಿದೆ. ಸಾಲದ್ದಕ್ಕೆ ಅಧಾರ್ ಗೆ ಅರ್ಜಿ ಸಲ್ಲಿಸಲು ಸಾವಿರಾರು ರೂಪಾಯಿ ಕೂಡ ಈ ಕುಟುಂಬ ವ್ಯಯಿಸಿದೆ. ಬಾಲಕಿ ಹೆಸರಲ್ಲಿ ಆಧಾರ್ ಕಾರ್ಡ್ ಇಲ್ಲದ ಕಾರಣದಿಂದಾಗಿ ಆಕೆ ಸ್ಕಾಲರಶಿಫ್ ನಿಂದಲೂ ಕೂಡ ವಂಚಿತಳಾಗಿದ್ದಾಳೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಸ್ಕಾಲರ್ ಶಿಫ್ ನೀಡುತ್ತದೆ. ಆದರೆ, ಆಧಾರ್ ಇಲ್ಲದ ಕಾರಣ ಆಕೆಗೆ ಸ್ಕಾಲರ್ ಶಿಪ್ ಕೂಡ ಸಿಕ್ಕಿಲ್ಲ.

ಇದೀಗ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೂ ಫೆಬ್ರವರಿ 19 ರಂದು ವಿಧ್ಯಾರ್ಥಿನಿಗೆ ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದೆ. ಪುತ್ತೂರು ವಿಭಾಗ ಅಂಚೆ ಇಲಾಖೆ ಸ್ಪಂದಿಸಿದ್ದು, ಹೊಸ ಆಧಾರ್‌ ಕಾರ್ಡ್‌ ವಿದ್ಯಾರ್ಥಿನಿಗೆ ಲಭಿಸಿದೆ.
ಪುತ್ತೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕ ಶ್ರೀಹರ್ಷ ನೆಟ್ಟಾರು, ಅಂಚೆ ಸಹಾಯಕಿ ಸುಮಾ ಎಚ್‌.ಎಸ್‌. ಅವರು ಪತ್ರಿಕಾ ವರದಿ ಆಧರಿಸಿ ವಿದ್ಯಾರ್ಥಿಯ ಆಧಾರ್‌ ಸಮಸ್ಯೆ ಬಗ್ಗೆ ಪೋಷಕರ ಜತೆ  ಚರ್ಚಿಸಿ ಮಾಹಿತಿ ಪಡೆದುಕೊಂಡರು. ಈ ಹಿಂದೆ ನೋಂದಾಯಿಸಿದ ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಲಾಯಿತು. ಕೊನೆಗೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸಂಜೆ ವೇಳೆ ಹೊಸ ಆಧಾರ್‌ ಪ್ರತಿಯನ್ನು ಬೆಳ್ಳಾರೆ ಅಂಚೆ ಇಲಾಖೆ ಕಚೇರಿಯಲ್ಲಿ ವಿದ್ಯಾರ್ಥಿನಿ ಪವಿತ್ರಾ, ತಾಯಿ ಗೀತಾ ಅವರಿಗೆ ವಿತರಿಸಲಾಯಿತು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಅಪರ ಜಿಲ್ಲಾಧಿಕಾರಿ ರೂಪಾ ಅವರ ಸೂಚನೆಯಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪವಿತ್ರಾ ಅವರ ಪೋಷಕರನ್ನು ಸಂಪರ್ಕಿಸಿ ಮಾಹಿತಿ ಪಡೆದು ತಾಲೂಕು ಆಡಳಿತಕ್ಕೆ ಸ್ಪಂದನೆ ನೀಡುವಂತೆ ನಿರ್ದೇಶಿಸಿದರು. ಸುಳ್ಯ ತಹಶೀಲ್ದಾರ್‌, ಉಪ ತಹಶೀಲ್ದಾರ್‌, ಪೆರುವಾಜೆ ಗ್ರಾಮಕರಣಿಕರು ಪೋಷಕರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಮೇಲಾಧಿಕಾರಿಗಳ ಗಮನಕ್ಕೆ ತಂದರು. ಸ್ಥಳೀಯವಾಗಿ ಅಗತ್ಯ ವಿವರಗಳನ್ನು ಒದಗಿಸುವಲ್ಲಿ ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಸಹಕಾರ ನೀಡಿದರು.

ಪವಿತ್ರಾಳ ಆಧಾರ್‌ ಸಮಸ್ಯೆಯ ಬಗ್ಗೆ ಫೇಸ್‌ಬುಕ್‌ನಲ್ಲಿ ಗಮನಿಸಿದ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಸಂದೇಶ ರವಾನಿಸಿ, ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಅದರಂತೆ ದ.ಕ. ಜಿಲ್ಲಾಡಳಿತ, ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ತತ್‌ಕ್ಷಣ ಆಧಾರ್‌ ಕಾರ್ಡ್‌ ಒದಗಿಸುವಂತೆ ನಿರ್ದೇಶಿಸಿದರು.

ಕೂಲಿ ಕಾರ್ಮಿಕ ಬಾಬು ಮತ್ತು ಗೀತಾ ದಂಪತಿ ಪುತ್ರಿ ಪವಿತ್ರಾ ಕಳೆದ ಐದು ವರ್ಷದಿಂದ ಆಧಾರ್‌ ಕಾರ್ಡ್‌ಗಾಗಿ ಪೋಷಕರ ಜತೆ ಸುತ್ತಾಡದ ಕಚೇರಿಗಳಿಲ್ಲ. ಖಾಸಗಿ, ಸರಕಾರಿ ಕೇಂದ್ರಗಳಲ್ಲಿ ಆಧಾರ್‌ ನೋಂದಣಿ ಮಾಡಿದ್ದರೂ ಈ ತನಕ ಕಾರ್ಡ್‌ ಸಿಕ್ಕಿರಲಿಲ್ಲ. ಪರಿಣಾಮ ಬಾಲಕಿ ಸ್ಕಾಲರ್‌ ಶಿಪ್‌ ಸೌಲಭ್ಯದಿಂದಲೂ ವಂಚಿತೆಯಾಗಿದ್ದಳು. ಇದೀಗ ಪವಿತ್ರಾ ಹಾಗೂ ಆಕೆಯ ಪೋಷಕರ ಐದು ವರ್ಷದ ಅಲೆದಾಟಕ್ಕೆ ಮುಕ್ತಿ ಸಿಕ್ಕಿದೆ.