BANTWAL
ಕಾಲ ಕೆಟ್ಟೊಯ್ತು, ಬಂಟ್ವಾಳದಲ್ಲಿ ದೇವಸ್ಥಾನಗಳ ಮೇಲೆ ಕಳ್ಳರ ಕಣ್ಣು ಸಿಸಿ ಟಿವಿಗಳಿಗೂ ಹೆದರದ ಖದೀಮರು..!!
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದ್ದು ಇದೀಗ ದೇವಸ್ತಾನಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಕಳೆದ ಎರಡು – ಮೂರು ದಿನಗಳಿಂದ ತಾಲೂಕಿನಲ್ಲಿ ದೇವಸ್ಥಾನಗಳ ಮೇಲೆ ಕಣ್ಣುಹಾಯಿಸಿರುವ ಕಳ್ಳರ ಗ್ಯಾಂಗ್ ನವೆಂಬರ್ 5 ಬಂಟ್ವಾಳದ ತುಂಬೆಯ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗಿಲಿನ ಚಿಲಕ ಮುರಿದು ಒಳ ಪ್ರವೇಶ ಮಾಡಿದ ಕಳ್ಳರು ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಹೇಳಲಾಗಿದೆ.
ದೇವಸ್ಥಾನದ ಕಛೇರಿಯಲ್ಲಿರಿಸಿದ್ದ ಸುಮಾರು ಒಂದುವರೆ ಕೆ.ಜಿ ತೂಕದ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಜಲದ್ರೋಣವನ್ನು ಕಳ್ಳರು ಒಯ್ದಿದ್ದಾರೆ. ಇದರ ಜೊತೆಗೆ ಗೊದ್ರೇಜ್, ಕ್ಯಾಶ್ ಡ್ರಾಯರ್ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಸುಮಾರು 50 ಸಾವಿರದಷ್ಟು ನಗದು ಹಣವನ್ನು ಕೂಡ ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ.ದೇವಸ್ಥಾನದ ಸುತ್ತ ಮುಂಜಾಗ್ರತಾ ಕ್ರಮವಾಗಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆಯಾದರೂ ಕಳ್ಳರ ತಂಡ ಕ್ಯಾಮರಾ ಡಿ.ವಿಆರ್ ನ್ನು ಕೂಡ ಬಿಡದೆ ಎಗರಿಸಿದ್ದಾರೆ. ಸೋಮವಾರ ಮುಂಜಾನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ದೇವಸ್ಥಾನವೊಂದರ ಕಳವು ನಡೆಯುವುದನ್ನು ಸ್ವತಃ ಅಲ್ಲಿನ ಅರ್ಚಕರು ಸಿ.ಸಿ.ಕ್ಯಾಮರಾದ ಮೂಲಕ ನೋಡಿದ್ದಾರೆ.
ಆದರೂ ಕಳ್ಳರ ಬಳಿ ಮಾರಕಾಸ್ತ್ರಗಳು ಇರುವುದು ಕಂಡು ಬಂದಿದ್ದರಿಂದ ತಡೆಯಲು ಅಸಾಧ್ಯವಾಗಿತ್ತು ಮತ್ತು ಈ ಕಳ್ಳತನದ ವಿಡಿಯೋ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿರುವುದು ಸುದ್ದಿಯಾಗಿತ್ತು. ಅಂತಹ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಕಳ್ಳರು ಯೋಚಿಸಿ ತುಂಬೆಯ ದೇವಸ್ಥಾನದ ಸಿ.ಸಿ.ಕ್ಯಾಮರಾದ ಪೂಟೇಜ್ ಇರುವ ಡಿವಿಆರ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ. ದೇವಸ್ಥಾನದ ಸಿಬ್ಬಂದಿ 6 ಗಂಟೆಗೆ ಬಂದಾಗ ಮುಂಬಾಗಿಲು ಚಿಲಕ ಮುರಿದಿದ್ದು ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಪ್ರಕಾಶ್ ಶೆಟ್ಟಿ ತುಂಬೆಯವರಿಗೆ ತಿಳಿಸಿದ್ದಾರೆ. ಇತ್ತೀಚೆಗೆ ಈ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ಮಾಡಿ ತನಿಖೆ ಆರಂಭಿಸಿದ್ದಾರೆ.
You must be logged in to post a comment Login