BANTWAL
ಶಂಭೂರು – ಎರಡು ಗುಂಪುಗಳ ನಡುವಿನ ಕಿತ್ತಾಟಕ್ಕೆ ನಿಂತು ಹೋದ ನೇಮೋತ್ಸವ

ಬಂಟ್ವಾಳ ಮಾರ್ಚ್ 12: ದೈವಸ್ಥಾನಕ್ಕೆ ಸಂಬಂಧಪಟ್ಟ ಎರಡು ಗುಂಪುಗಳ ನಡುವಿನ ಕಿತ್ತಾಟಕ್ಕೆ ಇದೀಗ ನೇಮೋತ್ಸವವೇ ನಿಂತು ಹೋದ ಘಟನೆ ಬಂಟ್ವಾಳ ತಾಲ್ಲೂಕು ಶಂಭೂರು ಗ್ರಾಮದ ಕಲ್ಲಮಾಳಿಗೆ ಇಷ್ಟದೇವತಾ ಮುಂಡತ್ತಾಯ ಅರಸು ದೈವಸ್ಥಾನದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಂಡಗಳು ಪತ್ರಿಕಾಗೋಷ್ಠಿ ನಡೆಸಿ ಆರೋಪ ಪ್ರತ್ಯಾರೋಪ ನಡೆಸಿದ್ದಾರೆ.
ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದಲ್ಲಿ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನದ ವಾರ್ಷಿಕ ಉತ್ಸವ ಮಾರ್ಚ್ 9ರಂದು ನಡೆಯಬೇಕಿತ್ತು. ಆದರೆ ಎರಡು ತಂಡಗಳ ನಡುವಿನ ಗುದ್ದಾಟಕ್ಕೆ ತಹಸೀಲ್ದಾರ್, ಪೊಲೀಸರು ಆಗಮಿಸಿ ನೇಮೋತ್ಸವ ನಿಲ್ಲಿಸಿದ್ದಾರೆ. ಈ ಘಟನೆ ಕುರಿತಂತೆ ಸೋಮವಾರ ಒಂದು ಗುಂಪಿನವರು ಪತ್ರಿಕಾಗೋಷ್ಠಿ ನಡೆಸಿ ಇರಂತಬೆಟ್ಟು ಕುಟುಂಬಕ್ಕೆ ಸೇರಿದವರು ತಮ್ಮ ರಾಜಕೀಯ ಪ್ರಭಾವದಿಂದ ತಾವು ಹೇಳಿದಂತೆ ಉತ್ಸವ ನಡೆಯಬೇಕೆಂದು ಹೇಳಿ ತಹಸೀಲ್ದಾರ್, ಪೊಲೀಸರನ್ನು ಕರೆಸಿ ಉತ್ಸವ ನಿಲ್ಲಿಸಿದ್ದಾರೆಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಯಾಗಿ ಪತ್ರೀಕಾಗೋಷ್ಠಿ ನಡೆಸಿರುವ ದೈವಸ್ಥಾನಕ್ಕೆ ಸಂಬಂಧಪಟ್ಟ ಮನೆತನದವರು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಹಶೀಲ್ದಾರರು, ಪೊಲೀಸರು ಮಧ್ಯ ಪ್ರವೇಶಿಸಿ, ಬಂಟ್ವಾಳ ತಾಲ್ಲೂಕು ಶಂಭೂರು ಗ್ರಾಮದ ಕಲ್ಲಮಾಳಿಗೆ ಇಷ್ಟದೇವತಾ ಮುಂಡತ್ತಾಯ ಅರಸು ದೈವಸ್ಥಾನದ ನೇಮೋತ್ಸವ ಆಚರಣೆಗೆ ತಡೆ ಹಾಕಿದ್ದಾರೆಯೇ ವಿನಾ, ನಾವು ನೇಮೋತ್ಸವವನ್ನು ನಿಲ್ಲಿಸಿಲ್ಲ ಹೇಳಿದ್ದಾರೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇರಂತಬೆಟ್ಟು ಒಂದನೇ ಮನೆತನದ ಕಿರಣ್ ಕುಮಾರ್ ಕೋಡಿಕಲ್, ‘ಊರಿನ ಕೆಲವರು ಸಮಿತಿ ರಚನೆ ಮಾಡಿಕೊಂಡು ನೇಮೋತ್ಸವ ನಡೆಸುವ ಪ್ರಯತ್ನ ಮಾಡಿದ್ದಾರೆ. 600 ವರ್ಷಗಳ ಇತಿಹಾಸ ಇರುವ ದೈವಸ್ಥಾನದಲ್ಲಿ, ಯಾರೊ ಕೆಲವರು ಸಂಘ ಕಟ್ಟಿಕೊಂಡು ನೇಮೋತ್ಸವ ನಡೆಸುವುದಾಗಿ ಬಂದಾಗ ಪಾರಂಪರಿಕವಾಗಿ ಬಂದಿರುವ ಗುತ್ತುಮನೆತನದವರು ಅದನ್ನು ಹೇಗೆ ಬಿಟ್ಟುಕೊಡಲು ಸಾಧ್ಯ’ ಎಂದು ಪ್ರಶ್ನಿಸಿದರು.
ಗ್ರಾಮದ ಕೆಲವರು ಸೋಮವಾರ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೈವಸ್ಥಾನಕ್ಕೆ ಸಂಬಂಧಪಟ್ಟಂತೆ ಸಮಿತಿ ರಚನೆ ಮಾಡಿಕೊಂಡು, ಆಚರಣೆಗೆ ಭಂಗ ತಂದಿದ್ದಾರೆ. ಸಮಿತಿಯವರೇ ಮೊದಲು ನ್ಯಾಯಾಲಯದ ಮೆಟ್ಟಿಲೇರಿದ್ದು, ಅದಕ್ಕೆ ಪ್ರತಿಯಾಗಿ ನಾವು ದಾಖಲೆ ಸಲ್ಲಿಸಿದ್ದೇವೆ. ನ್ಯಾಯಾಲಯದ ಆದೇಶ ಇದ್ದರೂ, ರಾಜಕೀಯ ಹಿನ್ನೆಲೆಯ ವ್ಯಕ್ತಿಯೊಬ್ಬರ ಸಹಕಾರ ಪಡೆದು, ನೇಮೋತ್ಸವ ನಡೆಸಲು ಅವರು ಸಿದ್ದತೆ ನಡೆಸಿದ್ದರು. ಇದರಲ್ಲಿ ಮುಜರಾಯಿ ಇಲಾಖೆಯ ಎಸಿಯವರ ನಡೆ ಕೂಡ ಅನುಮಾನ ಮೂಡಿಸಿದೆ’ ಎಂದು ಆರೋಪಿಸಿದರು.
‘ನೇಮೋತ್ಸವ ನಿಲ್ಲಿಸುವ ಮೂಲಕ ಊರಿನ ಸಂಪ್ರದಾಯ ಕೆಡಿಸುವ ಪ್ರಯತ್ನ ನಡೆದಿದೆ. ಕಂಚಿಲ್ ಸೇವೆ ಸಲ್ಲಿಸಬೇಕಾಗಿದ್ದ ಭಕ್ತರಿಗೆ, ಊರಿನವರಿಗೆ ನೇಮೋತ್ಸವ ನಿಂತಿದ್ದರಿಂದ ಬೇಸರವಾಗಿದೆ. ಆದರೆ, ನೇಮೋತ್ಸವ ನಿಲ್ಲಿಸಲು ಕಾರಣರಾದವರಿಗೆ ದೈವವೇ ಉತ್ತರ ನೀಡುತ್ತದೆ’ ಎಂದು ಹೇಳಿದರು.