Connect with us

    KARNATAKA

    ಕೊರೊನಾ ನಿಯಂತ್ರಣ ಹೆಸರಲ್ಲಿ ಜಿಲ್ಲಾಧಿಕಾರಿಗಳ ತುಘಲಕ್ ದರ್ಬಾರ್ – ಸಿದ್ದರಾಮಯ್ಯ

    ಬೆಂಗಳೂರು ಎಪ್ರಿಲ್ 10: ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ರಾತ್ರಿ ಕರ್ಪ್ಯೂ ಜಾರಿಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದು, ಇದು ಕೊರೊನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಈ ಕುರಿತಾಗಿ ಸರಣಿ ಟ್ವೀಟ್‌ಗಳ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ದೇಶದ ಪ್ರಧಾನಿ ಅಂಧಾ ದರ್ಬಾರ್‌ನಿಂದ ಸಿಎಂ ಬಿಎಸ್‌ ಯಡಿಯೂರಪ್ಪ ಸ್ಪೂರ್ತಿ ಪಡೆದರೆ, ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲವು ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


    ಮುಖ್ಯಮಂತ್ರಿಗಳೇ, ಸ್ವಲ್ಪ ಬುದ್ದಿ ಕಲಿಯಿರಿ ಅವರಿಗೆ ಬುದ್ದಿ ಹೇಳಿ. ಕೋವಿಡ್ ವ್ಯಾಕ್ಸಿನ್ ಪ್ರಾರಂಭಿಸಿ 80 ದಿನಗಳು ಕಳೆದರೂ ಕೇವಲ ಶೇಕಡಾ ಒಂದರಷ್ಟು ಜನಸಂಖ್ಯೆಗೆ ಮಾತ್ರ ನೀಡಲು ಸಾಧ್ಯವಾಗಿದೆ.ರಾಜ್ಯದಲ್ಲಿ ಈಗಾಗಲೇ ವ್ಯಾಕ್ಸಿನ್ ಕೊರತೆಯ ದೂರು ಕೇಳಿಬರತೊಡಗಿದೆ. ಈ ನಿಟ್ಟಿನಲ್ಲಿ ಗಿಮಿಕ್‌ಗಳನ್ನು ಬಿಟ್ಟು ಈ ಕಡೆ ಗಮನಹರಿಸಿ ಎಂದು ಒತ್ತಾಯಿಸಿದ್ದಾರೆ.


    ಕೊರೊನಾ ನಿಯಂತ್ರಿಸುವ ಪ್ರಾಮಾಣಿಕ ಇಚ್ಚೆ ಸಿಎಂ ಮತ್ತು ಆರೋಗ್ಯ ಸಚಿವರು ಹೊಂದಿದ್ದರೆ, ಮೊದಲು ಕೊರೊನಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು, ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು ಮತ್ತು ಸೋಂಕಿತರಿಗೆ ತಕ್ಷಣ ಚಿಕಿತ್ಸೆ ನೀಡಬೇಕು.


    ರಾತ್ರಿ ತೆರೆದಿರುವ ಹೊಟೇಲ್, ಚಿತ್ರಮಂದಿರ ಮತ್ತು ಅಂಗಡಿಮುಂಗಟ್ಟುಗಳನ್ನು ಮುಚ್ಚಿದರೆ ಸಾಲದೇ? ಕೊರೊನಾ ನಿಯಂತ್ರಣಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂವಿನ ನಾಟಕ ಯಾಕೆ? ಎಂದು ಪ್ರಶ್ನಿಸಿದ ಅವರು ರಾಜ್ಯದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂಹೇರಿರುವ ಸರ್ಕಾರದ ಕ್ರಮ, ಕೊರೊನಾ ಓಡಿಸಲು ತಟ್ಟೆ ಬಡಿಯುವ ಕ್ರಮದಷ್ಟೇ ಬಾಲಿಷವಾದುದು ಎಂದು ಕಿಡಿಕಾರಿದ್ದಾರೆ.  ಅಷ್ಟೇ ಅಲ್ಲದೆ ಅಲ್ಲೊಬ್ಬರು ಪಾಳೆಯಗಾರ, ಇಲ್ಲೊಬ್ಬರು ಮಾಂಡಲಿಕ! ಭಲೇ ಜೋಡಿ! ಎಂದು ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪನವರನ್ನು ಲೇವಡಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply