Connect with us

LATEST NEWS

ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ – ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ!

ಮಂಗಳೂರು ಎಪ್ರಿಲ್ 10: ನೆರೆಮನೆಯ ಅಪ್ರಾಪ್ತ ಬಾಲಕಿಯನ್ನು ನಿರಂತರ ಅತ್ಯಾಚಾರ ನಡೆಸಿ ಗರ್ಭಿಣಿಯನ್ನಾಗಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೊ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ಹಾಗೂ 1.10 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಶಿಕ್ಷೆಗೆ ಒಳಗಾದ ಆರೋಪಿ ಮೂಡುಬಿದಿರೆ ಅಲಂಗಾರಿನ ಮಾರ್ಪಾಡಿಯಲ್ಲಿ ವಾಸವಿದ್ದ ಶಶಿ ಯಾನೆ ಶಶಿಕುಮಾರ್‌ ಎಂದು ಗುರುತಿಸಲಾಗಿದ್ದು, 14 ವರ್ಷದ ಬಾಲಕಿಯನ್ನು ನಿರಂತರ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿಸಿದ್ದ ಆರೋಪ ಎದುರಿಸುತ್ತಿದ್ದ.
ಶಶಿಕುಮಾರ್‌ ಮಾರ್ಪಾಡಿಯಲ್ಲಿತನ್ನ ಸಹೋದರಿಯ ಮನೆಯಲ್ಲಿ ವಾಸವಿದ್ದು, ಮೂಡುಬಿದಿರೆಯಲ್ಲಿ ಪಿಗ್ಮಿ ಕಲೆಕ್ಟರ್‌ ಕೆಲಸ ಮಾಡಿಕೊಂಡಿದ್ದ. ಈತ ವಾಸವಿದ್ದ ಮನೆಗೆ ನೆರೆಮನೆ ಬಾಲಕಿ ಟಿವಿ ನೋಡಲು ಬರುತ್ತಿದ್ದಳು. ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ ಯಾರೂ ಇಲ್ಲದ ಸಂದರ್ಭ ಆಕೆ ಮೇಲೆ ಅತ್ಯಾಚಾರ ನಡೆಸಿದ್ದ. ಆ ಬಳಿಕ ಐದಾರು ಬಾರಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ.


ಈ ವಿಚಾರವನ್ನು ಬಾಲಕಿ ಮನೆಯಲ್ಲಿ ಹೇಳಿರಲಿಲ್ಲ. ಆದರೆ ಬಾಲಕಿಗೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಲೇಡಿಗೋಶನ್‌ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು. ಆ ಬಳಿಕ ಬಾಲಕಿಯ ತಂದೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಾವಿತ್ರಿ ವೆಂಕಟರಮಣ ಭಟ್‌ ಅವರು, ಆರೋಪಿ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಪು ಪ್ರಕಟಿಸಿ ಶಿಕ್ಷೆ ವಿಧಿಸಿದ್ದಾರೆ.