FILM
ಸಿಂಹದ ಮರಿಯನ್ನು ದತ್ತುಪಡೆದ ವಸಿಷ್ಠ ಸಿಂಹ
ಬೆಂಗಳೂರು, ಜನವರಿ 02: ಸಿನಿಮಾ ತಾರೆಯರು ಪ್ರಾಣಿ ಪಕ್ಷಿಗಳನ್ನು ದತ್ತುಪಡೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ಆ ಸಾಲಿನಲ್ಲಿ ಇದೀಗ ನಟ ವಸಿಷ್ಠ ಸಿಂಹ ಕೂಡಾ ಸೇರಿಕೊಂಡಿದ್ದು, ಹೊಸ ವರ್ಷದ ಹಿನ್ನೆಯಲ್ಲಿ ಸಿಂಹದ ಮರಿಯೊಂದನ್ನು ದತ್ತು ಪಡೆದುಕೊಂಡು, ಆ ಸಿಂಹದ ಮರಿಗೆ ತನ್ನ ತಂದೆಯ ಹೆಸರಿಟ್ಟಿದ್ದಾರೆ.
ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದಲ್ಲಿರುವ ಮೂರು ತಿಂಗಳ ಸಿಂಹದ ಮರಿಯೊಂದನ್ನು ದತ್ತು ಪಡೆದಿರುವ ನಟ, ಈ ಸಿಂಹದ ಮರಿಗೆ ತನ್ನ ತಂದೆಯಾದ ‘ವಿಜಯ ನರಸಿಂಹ’ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.
ಇವರ ಈ ಪ್ರಾಣಿ ಪ್ರೇಮಕ್ಕೆ ಅಭಿಮಾನಿಗಳನ್ನು ಒಳಗೊಂಡಂತೆ ಹಲವಾರು ಪ್ರಾಣಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಟ ವಸಿಷ್ಠ ಸಿಂಹ ಹೊಸ ವರ್ಷದ ಮೊದಲ ದಿನವನ್ನು ವಿಭಿನ್ನವಾಗಿ ಆಚರಿಸುವ ಆಸೆ ನನ್ನದು. ಮುಂಬರುವ ದಿನಗಳಲ್ಲಿಯೂ ಇಂತಹ ಹಲವಾರು ಉತ್ತಮ ಕಾರ್ಯಗಳನ್ನು ಮಾಡುವ ಗುರಿ ಹೊಂದಿದ್ದೇನೆ. ಇದರ ಮೊದಲ ಹೆಜ್ಜೆಯಾಗಿ ಈ ಸಿಂಹದ ಮರಿಯನ್ನು ದತ್ತುಪಡೆದಿದ್ದೇನೆ ಎಂದಿದ್ದಾರೆ.
ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಸ್ಯಾಂಡಲ್ ವುಡ್ ನಲ್ಲಿ ಭಾರಿ ಹೆಸರು ಮಾಡುತ್ತಿರುವ ನಟ ವಸಿಷ್ಠ ಸಿಂಹ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ಮಾಡ್ತಿದ್ದಾರೆ. ‘ಓದೆಲ ರೈಲ್ವೇ ಸ್ಟೇಷನ್’ ಎಂಬ ತೆಲುಗು ಚಿತ್ರದಲ್ಲಿ ವಸಿಷ್ಠ ನಾಯಕನಾಗಿದ್ದು, ಹೊಸ ವರ್ಷದ ಪ್ರಯುಕ್ತ ಪೋಸ್ಟರ್ ಸಹ ಬಿಡುಗಡೆಯಾಗಿದೆ.
You must be logged in to post a comment Login