LATEST NEWS
ಯುವ ಧೂಮಪಾನಿಗಳಿಗೆ ಬಂದಿದೆ ಕೇಂದ್ರ ಸರ್ಕಾರದ ಹೊಸ ‘ಬಿಲ್ಲು’!

ನವದೆಹಲಿ, ಜನವರಿ 02: ಯುವ ಧೂಮಪಾನಿಗಳಿಗೆ ಇದೊಂದು ‘ಉಸಿರುಗಟ್ಟಿಸೋ’ ಸುದ್ದಿ ಎಂದರೂ ತಪ್ಪೇನಿಲ್ಲ. ಯಾಕೆಂದರೆ ಈ ಕೇಂದ್ರ ಸರ್ಕಾರದ ಹೊಸ ಬಿಲ್ಲು ಯುವ ಧೂಮಪಾನಿಗಳನ್ನೇ ಗುರಿಯಾಗಿಸಿಕೊಂಡಿದೆ. ಧೂಮಪಾನ ನಿಯಂತ್ರಣ ಸಲುವಾಗಿ ಕೇಂದ್ರ ಸರ್ಕಾರ ಹೊಸ ಮಸೂದೆಯೊಂದನ್ನು ಸಿದ್ಧಪಡಿಸಿದೆ.
ಇತ್ತೀಚೆಗೆ ಮೂರು ಕೃಷಿ ಮಸೂದೆಗಳನ್ನು ಕಾಯ್ದೆಗಳನ್ನಾಗಿಸಿ ಸಂಚಲನ ಮೂಡಿಸಿರುವ ಕೇಂದ್ರ ಸರ್ಕಾರ, ಇದೀಗ ಧೂಮಪಾನಿಗಳಿಗೆ ಚುರುಕು ಮುಟ್ಟಿಸಲು ಮುಂದಾಗಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ತಡೆ ಮತ್ತು ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಸರಬರಾಜು ಹಾಗೂ ವಿತರಣೆ ನಿಯಂತ್ರಣ) ತಿದ್ದುಪಡಿ ಕಾಯ್ದೆ, 2020ರ ಮೂಲಕ ಈ ಕ್ರಮಕ್ಕೆ ಮುಂದಾಗಿದೆ.

ಹೊಸ ತಿದ್ದುಪಡಿ ಪ್ರಕಾರ ಸಿಗರೇಟ್ ಸೇವನೆ/ಮಾರಾಟ ಸಂಬಂಧ ಇರುವ ವಯಸ್ಸಿನ ಮಿತಿ ಹೆಚ್ಚಾಗಲಿದೆ. ಅಂದರೆ ಈ ಹಿಂದೆ 18 ವರ್ಷದ ಒಳಗಿನವರಿಗೆ ಸಿಗರೇಟ್ ಮಾರಾಟ ಮಾಡುವುದು ಅಥವಾ ಅವರು ಧೂಮಪಾನ ಮಾಡುವುದಕ್ಕೆ ನಿರ್ಬಂಧವಿತ್ತು. ಈ ತಿದ್ದುಪಡಿ ಪ್ರಕಾರ ಅದು 21 ವರ್ಷಕ್ಕೆ ಹೆಚ್ಚಳವಾಗಲಿದ್ದು, ಮುಂದೆ 21 ವರ್ಷದ ಒಳಗಿನವರಿಗೆ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಅಥವಾ ಆ ವಯಸ್ಸಿನ ಒಳಗಿನವರು ಅದನ್ನು ಸೇವಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.

A boy has a smoke in Yogyakarta, Indonesia.
ಇದನ್ನು ಉಲ್ಲಂಘಿಸಿದಲ್ಲಿ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಎರಡನೇ ಸಲ ಉಲ್ಲಂಘಿಸಿದರೆ ಐದು ವರ್ಷ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು. ಮತ್ತೊಂದೆಡೆ ನಿರ್ಬಂಧಿತ ಪ್ರದೇಶದಲ್ಲಿ ಧೂಮಪಾನ ಮಾಡಿದರೆ ಸದ್ಯ 200 ರೂ. ದಂಡವಿದ್ದು, ಅದನ್ನು 2,000 ರೂಪಾಯಿಗೆ ಹೆಚ್ಚಿಸಲು ಕೂಡ ಈ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.