DAKSHINA KANNADA
ಸುರತ್ಕಲ್: ಟೋಲ್ ಗೇಟ್ ಕಿತ್ತೆಸೆಯಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕರೆ
ಮಂಗಳೂರು, ಅಕ್ಟೋಬರ್ 17: ಹಲವು ವರ್ಷಗಳಿಂದ ಭಾರೀ ವಿವಾದ ಸೃಷ್ಟಿಸಿದ್ದ ಮಂಗಳೂರಿನ ಸುರತ್ಕಲ್ ಟೋಲ್ ಗೇಟ್ ಗಲಾಟೆ ನಾಳೆ( ಅ.18) ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದ್ದು ಟೋಲ್ ಗೇಟ್ ಕಿತ್ತೆಸೆಯಲು ನಾಳೆ ‘ನೇರ ಕಾರ್ಯಾಚರಣೆ’ಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಭಾರಿ ಪೊಲೀಸ್ ಬಂದೋಬಸ್ತನ್ನು ನಾಳೆ ಪ್ರತಿಭಟನೆ ನಡೆಯುವ ಸುರತ್ಕಲ್ ಪ್ರದೇಶದಲ್ಲಿ ನಿಯೋಜನೆ ಮಾಡಲಾಗಿದೆ. ಟೋಲ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆಗೆ ಕರೆ ನೀಡಿದ್ದು, ಕಾಂಗ್ರೆಸ್, ಡಿವೈಎಫ್ಐ, ಸಿಪಿಐಎಂ ಹೀಗೆ ಹತ್ತಾರು ಸಂಘಟನೆಗಳು, ಸಮಾನ ಮನಸ್ಕ ಸಂಘಟನೆಗಳು ಈಗಾಗಲೇ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. 2015 ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ಗೇಟ್ ಆರಂಭಗೊಂಡಿತ್ತು.
ಆದರೆ ಹೈವೆಯಲ್ಲಿ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಇರಬೇಕಾದದ್ದು ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ಸುರತ್ಕಲ್ ಟೋಲ್ ಆ ನಿಯಮವನ್ನು ಮೀರಿದೆ ಎಂಬ ಆರೋಪ ಇದೆ. ಈಗಾಗಲೇ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಪ್ರಚಾರ ನಡೆಸಿರುವ ಟೋಲ್ ವಿರೋಧಿ ಸಮಿತಿ, ನಾಳೆ ಬೆ.10 ಗಂಟೆಗೆ ಸುರತ್ಕಲ್ ಟೋಲ್ ಗೇಟ್ ಗೆ ಮುತ್ತಿಗೆಗೆ ಸಿದ್ದತೆ ನಡೆಸಿದೆ. ಮುತ್ತಿಗೆ ವೇಳೆ ಪೊಲೀಸ್ ಇಲಾಖೆ ಮತ್ತು ಹೋರಾಟಗಾರರ ಜೊತೆ ಸಂಘರ್ಷ ನಡೆಯುವ ಸಾಧ್ಯತೆಗಳೂ ದಟ್ಟವಾಗಿವೆ. ಈಗಾಗಲೇ ಟೋಲ್ ಗೇಟ್ ವಿರೋಧಿ ಹೋರಾಟಗಾರರಿಗೆ ಪೊಲೀಸ್ ನೋಟೀಸ್ ಜಾರಿಯಾಗಿದೆ.
ಸಂಚಾಲಕ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಸೇರಿ 16 ಜನರಿಗೆ ನೋಟೀಸ್ ನೀಡಿದ್ದು, ಅಹಿತಕರ ಘಟನೆ ನಡೆದರೆ ಹೋರಾಟಗಾರರೇ ಜವಾಬ್ದಾರಿ ಅಂತ ಮುಚ್ಚಳಿಕೆ ಬರೆಸಲು ನೋಟೀಸ್ ಕೊಡಲಾಗಿದೆ, ಆದ್ರೂ ನಾಳಿನ ನಿರ್ಣಾಯಕ ಹೋರಾಟಕ್ಕೆ ಸಂಘಟನೆಗಳು ಮುಂದಾಗಿವೆ. ಈ ಮಧ್ಯೆ ಆಡಳಿತ ರೂಢ ಸಂಸದ ನಳಿನ್ ಕುಮಾರ್ ಕಟೀಲ್ ಶಾಂತಿಯುತ ಹೋರಾಟಕ್ಕೆ ನನ್ನ ವಿರೋಧ ಇಲ್ಲ. ಆದರೆ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ತನ್ನದೇ ಆದ ನಿಯಮದಡಿ ಕ್ರಮ ಕೈಗೊಳ್ಳುತ್ತದೆ.
ಹೆದ್ದಾರಿ ಪ್ರಾಧಿಕಾರ 20 ದಿನ ಸಮಯ ಕೇಳಿದೆ, ನಾವು ಸಮಯ ಕೊಡುವ. ನಾನು ಹೋರಾಟಗಾರರ ಜೊತೆ ಮಾತನಾಡಿದ್ರೆ ರಾಜಕೀಯ ಬರುತ್ತೆ. ಹಾಗಾಗಿ ಡಿಸಿ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಅವರ ಜೊತೆ ಮಾತನಾಡಿಸಿದ್ದೇನೆ. ಈಗ ಮತ್ತೆ ವಿನಂತಿ ಮಾಡ್ತೇನೆ, 20 ದಿನಗಳ ಕಾಲಾವಕಾಶ ಕೊಡಿ. ಹೋರಾಟವನ್ನ ಶಾಂತಿಯುತವಾಗಿ ಮಾಡಲು ನನ್ನ ಅಭ್ಯಂತರ ಇಲ್ಲ. ನಾನು ಟೋಲ್ ಗೇಟ್ ತೆಗೆಯಲು ಕಠಿಬದ್ದನಾಗಿದ್ದೇನೆ, ತೆಗೆದೇ ತೆಗೆಸ್ತೀನಿ. ಕೆಲ ತಾಂತ್ರಿಕ ಸಮಸ್ಯೆಗಳಿಂದ ಟೋಲ್ ಗೇಟ್ ತೆರವು ವಿಳಂಬವಾಗಿದೆ. ಹೀಗಾಗಿ 20 ದಿನಗಳ ಕಾಲ ಹೋರಾಟ ಮುಂದೂಡಿ ಅಂತ ವಿನಂತಿ ಮಾಡ್ತೇನೆ ಎಂದಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರೀಯಿಸಿರುವ ಹೋರಾಟ ಸಮಿಯಿಯ ಮುನೀರ್ ಕಾಟಿಪಳ್ಳ ನಾಳೆ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯನ್ನು ಪೊಲೀಸರ ಮೂಲಕ ನಿರ್ದಯವಾಗಿ ಹತ್ತಿಕ್ಕುವ ಯತ್ನವನ್ನು ಬಿಜೆಪಿ ಸರಕಾರ ನಡೆಸುತ್ತಿದೆ. ಅದರ ಭಾಗವಾಗಿ ಹೋರಾಟ ಸಮಿತಿಯ 50 ಕ್ಕೂ ಹೆಚ್ಚು ಪ್ರಮುಖರ ಮೇಲೆ ಶಾಂತಿಭಂಗ ಕಾಯ್ದೆ ಅಡಿ ನೋಟೀಸು ಜಾರಿ ಮಾಡಲಾಗಿದೆ. ನೋಟೀಸು ನೀಡುವ ನೆಪದಲ್ಲಿ ಮಧ್ಯರಾತ್ರಿ ಮನೆಗಳಿಗೆ ಬಂದು ಮಾನಸಿಕವಾಗಿ ಹಿಂಸಿಸಲಾಗಿದೆ. ಆ ಮೂಲಕ ಟೋಲ್ ಗೇಟ್ ವಿರೋಧಿ ಹೋರಾಟವನ್ನು ಹತ್ತಿಕ್ಕುವ, ಟೋಲ್ ಗೇಟ್ ಸುಲಿಗೆಯನ್ನು ಶಾಶ್ವತಗೊಳಿಸುವ ಹುನ್ನಾರ ನಡೆಸಲಾಗಿದೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬಿಜೆಪಿ ಸರಕಾರದ ಈ ಸರ್ವಾಧಿಕಾರಿ ಧೋರಣೆಯನ್ನು ಬಲವಾಗಿ ಖಂಡಿಸುತ್ತಿದ್ದು, ಪೊಲೀಸರು ಹೊರಡಿಸಿರುವ ನೋಟೀಸನ್ನು ತಿರಸ್ಕರಿಸಿ ಬಂಧನಕ್ಕೆ ಒಳಗಾಗಗಲು ಸಿದ್ದ. ನಾಳೆ ಹೋರಾಟವನ್ನು ಮತ್ತಷ್ಟು ಉತ್ಸಾಹದಿಂದ ಶಾಂತಿಯುತವಾಗಿ ನಡೆಸಲು ನಿರ್ಧರಿಸಿದೆ ಎಂದಿದ್ದಾರೆ. ಒಟ್ಟಿನಲ್ಲಿ ನಾಳೆಯ ಪ್ರತಿಭಟನೆ ಯಾವ ಹಂತಕ್ಕೆ ಮುಟ್ಟುತ್ತೆ ಕಾದು ನೋಡಬೇಕಿದೆ
You must be logged in to post a comment Login